ಒಳ್ಳೆ ವಿಷ್ಯ

ನಾನ್ಯಾಕೆ ಸಾಯಿಬಾಬಾ ಅವರನ್ನ ನಂಬ್ತೀನಿ..?

-ಕಿರಿಕ್ ಕೀರ್ತಿ

ಇದು ನನಗೆ ತುಂಬಾ ಜನ‌ ಕೇಳಿರೋ ಪ್ರಶ್ನೆ ‘ನೀವ್ಯಾಕೆ ಯಾವಾಗ್ಲೂ ‘ಓಂ ಸಾಯಿರಾಂ’ ಅಂತೀರ ಅನ್ನೋದು. ಉತ್ತರ ತುಂಬಾ ಸರಳವಾದ್ರೂ ಹೇಳೋದಕ್ಕೆ ಜಾಸ್ತಿ ಇದೆ. ಅದನ್ನ ಈಗ ಹೇಳ್ತೀನಿ ಕೇಳಿ, ಅಲ್ಲ ಓದಿ…

ನಾನು 26 ವರ್ಷ ದೇವರು ನಂಬಿದವನಲ್ಲ. ಅದ್ಯಾಕೋ ಗೊತ್ತಿಲ್ಲ..! ಜೀವನದ ಕಷ್ಟಗಳು ನನಗೆ ದೇವರಿದ್ದಾನೆ ಅಂತ ಯೋಚಿಸೋಕು ಅವಕಾಶ ಕೊಡಲಿಲ್ಲ. ದೇವ್ರಿದ್ದಿದ್ರೆ ಇಷ್ಟು ಕಷ್ಟ ಕೊಡ್ತಾನಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಆದ್ರೂ ಜೀವನ ಹಂಗೂ ಹಿಂಗೂ ನಡೀತಿತ್ತು. ಆದ್ರೆ ಯಾವಾಗ ನನ್ನ ಲವ್ ಸ್ಟೋರಿ ಶುರುವಾಯ್ತೋ ಅಲ್ಲಿಂದ ‘ಬಾಬಾ ಬಾಬಾ’ ಅನ್ನೋ ಹೆಸರು ಪದೇ ಪದೇ ಕಿವಿಗೆ ಬೀಳ್ತಾ ಇತ್ತು. ಯಾಕಂದ್ರೆ ಆಗಿನ‌ ನನ್ನ ಲವರ್, ಈಗಿನ ನನ್ನ ಮಡದಿ ಎರಡೂ ಆಗಿರೋ ನನ್ನಾಕೆ ಅಪ್ಪಟ ಬಾಬಾ ಭಕ್ತೆ. ‘ಬಾಬಾ ಪೂಜೆ ಮಾಡ್ತಿದೀನಿ, ಬಾಬಾ ವ್ರತ ಮಾಡ್ತಿದೀನಿ, ಬಾಬಾ ದೇವಸ್ಥಾನದಲ್ಲಿದೀನಿ’ ಅನ್ನೋದು ಅವಳು ಯಾವಾಗ್ಲೂ ಹೇಳ್ತಿದ್ದ ಮಾತುಗಳು..! ಅವಳು ಬಾಬಾ ದೇವಸ್ಥಾನಕ್ಕೆ ಹೋದ್ರೂ, ನಾನು ಒಳಗೆ ಹೋಗದೇ ಹೊರಗೇ ಕಾಯ್ತಾ ಇರ್ತಿದ್ದೆ..! ಒಂದು ದಿನ ನಮ್ಮಿಬ್ಬರ ಲವ್ ಸ್ಟೋರಿ ಅವರ ಮನೇಲಿ ಗೊತ್ತಾಗಿಬಿಡ್ತು.

ಅಷ್ಟೇ, ಅಲ್ಲಿಂದ ಆಚೆಗೆ 20-25 ದಿನ ಅವಳೆದ್ದಾಳೆ, ಹೇಗಿದ್ದಾಳೆ, ಏನ್ ಮಾಡ್ತಿದ್ದಾಳೆ ಅನ್ನೋ ಸಣ್ಣ ಸುಳಿವೂ ನನಗೆ ಸಿಗಲಿಲ್ಲ..! ಎಷ್ಟು ದಿನ ಅಂತ ಹೀಗೇ ಇರೋದು ಅಂತ ಕಷ್ಟಪಟ್ಟು ಅವರ ಸಂಬಂಧಿಕರೊಬ್ಬರ ಫೋನ್ ನಂಬರ್ ಹುಡುಕಿ ಅವರಿಗೆ ಧೈರ್ಯ ಮಾಡಿ ಕರೆ ಮಾಡ್ದೆ. ‘ನೋಡಿ, ನಾವಿಬ್ರೂ ಲವ್ ಮಾಡ್ತಿದ್ವಿ, ಈಗ ಹಿಂಗೆಲ್ಲಾ ಆಗೋಗಿದೆ. ನಂಗೆ ಏನಾದ್ರೂ ಸಹಾಯ ಮಾಡೊಕಾಗುತ್ತಾ’ ಅಂತ ಕೇಳ್ದೆ. ಅವರು ‘ ನೋಡಪ್ಪ, ಸಹಾಯ ಮಾಡೋಕೆ ನಾವ್ಯಾರು? ಫ್ಯಾಮಿಲಿಯಲ್ಲಿ ಇದಕ್ಕೆಲ್ಲಾ ಸಪೋರ್ಟ್ ಮಾಡಕ್ಕಾಗಲ್ಲ. ಆ ಬಾಬಾನ ಬೇಡ್ಕೋ, ಅವರೇ ಎಲ್ಲಾ ಒಳ್ಳೇದ್ ಮಾಡ್ತಾರೆ’ ಅಂತ ಹೇಳಿ ಫೋನ್ ಕಟ್ ಮಾಡಿದ್ರು..! ಇದೇನಪ್ಪಾ, ಇವರೂ ಬಾಬಾ ಅಂತಾರೆ ಅಂತ ಮನಸಲ್ಲೇ ಅನ್ಕೊಂಡೆ. ಆದ್ರೂ ಒಂದು ಟೆಸ್ಟ್ ಆಗೇ ಬಿಡ್ಲಿ ಅಂತ ಅವತ್ತು ಸ್ವ ಇಚ್ಚೆಯಿಂದ ಮೊದಲ ಬಾರಿಗೆ ಮಲ್ಲೇಶ್ವರಂ ಬಾಬಾ ದೇವಸ್ಥಾನಕ್ಕೆ ಹೋದೆ..! ನಂಗೇ ಒಳಗೊಳಗೇ ಏನೇನೋ ಅನ್ನಿಸ್ತಿತ್ತು. ನಾನಾಗೇ ಬಾಬಾ ಹತ್ರ ಬರೋ ಹಂಗಾಯ್ತಲ್ಲಪ್ಪ ಅಂತ.. ಆದ್ರೂ ಒಂದು ಗುಲಾಬಿ ಹೂ ಹಿಡಿದು ಬಾಬಾ ದೇವಸ್ಥಾನದ ಒಳಗೆ ಎಂಟ್ರಿ ಕೊಟ್ಟೆ. ಅವರ ಪಾದದ ಬಳಿ ಆ ಗುಲಾಬಿ ಹೂ ಇಟ್ಟು ಅಲ್ಲೇ ಸ್ವಲ್ಪ ಹೊತ್ತು ಕೂತೆ. ಸ್ಪೀಕರಲ್ಲಿ ಬಾಬಾ ಭಜನೆ ಕೇಳಿಸ್ತಿತ್ತು.

ನನ್ನ ಫೋನ್ ಸಣ್ಣಗೆ ವೈಬ್ರೇಟ್ ಆಯ್ತು. ಯಾರದಪ್ಪ ಫೋನು ಅಂತ ನೋಡಿದ್ರೆ ಅದೊಂದು ಅನ್‌ನೋನ್ ನಂಬರ್. ಪೋನ್ ಕಿವಿಗಿಟ್ಟು ಹಲೋ ಅಂದೆ. ಆ ಕಡೆಯಿಂದ ಒಂದು ಹುಡುಗನ ಧ್ವನಿ ಕೇಳಿಸ್ತು..’ ಅಣ್ಣ, ನಾನು ಅರ್ಪಿತಕ್ಕನ ಮನೆ ಪಕ್ಕದಲ್ಲಿರೋದು. ಅಕ್ಕ ಒಂದು ಲೆಟರ್ ಕೊಟ್ಟಿದಾರೆ, ನಿಮಗೆ ಕೊಡ್ಬೇಕಿತ್ತು’ ಅಂದ..! ಒಂದ್ ಸಲ ಖುಷಿ ಆಗೋಯ್ತು. ಬಾಬಾ ಮುಖ ನೋಡಿ ಏನ್ ಬಾಬಾ ನಿಮ್ ಹವಾ ಅನ್ಕೊಂಡು ಅಲ್ಲಿಂದ ಅವನ ಬಳಿ ಹೊರಟು ಲೆಟರ್ ಇಸ್ಕೊಂಡು ಅಲ್ಲೇ ಓದಿ, ಅದಕ್ಕೊಂದು ರಿಪ್ಲೆ ಸಹ ಬರೆದು ಅವನ ಕೈಲೇ ಕಳಿಸಿಕೊಟ್ಟೆ..! ಆ ಗುರುವಾರ ನನಗೆ ತುಂಬಾ ಖುಷಿ ಕೊಟ್ಟ ಗುರುವಾರ. ನನ್ನ ಹುಡುಗಿ ನಂಗೋಸ್ಕರ ಕಾಯ್ತಿದ್ದಾಳೆ ಅಂತ ಗೊತ್ತಾದ ವಾರ… ಈ ವಿಷಯವನ್ನ ಬಾಬಾ ಸಲಹೆ ಕೊಟ್ಟಿದ್ದ ಅವರ ಸಂಬಂಧಿಕರಿಗೆ ತಿಳಿಸ್ದೆ. ಅವರು ಮುಂದಿನ ಗುರುವಾರ ಸಿಗ್ತೀನಿ ಅಂತಾನೂ ಹೇಳಿದ್ರು. ಅವರ ಭೇಟಿ ಮುಂದಿನ ಗುರುವಾರ ಆಯ್ತು. ಅವರು ಕೊಟ್ಟ ಟಿಪ್ಸ್ ಆಧಾರದ ಮೇಲೆ ವಾರ ಬಿಟ್ಟು ಅರ್ಪಿತಾಳ ಅಪ್ಪ ಅಮ್ಮನಿಗೆ ಕರೆ ಮಾಡ್ದೆ. ಆ ಸಂದರ್ಭದಲ್ಲಿ ಅವರು ಬಾಬಾ ದೇವಸ್ಥಾನದಲ್ಲಿದ್ರಂತೆ. ಅವರಿಗೆ ಅದೊಂಥರಾ ಪಾಸಿಟಿವ್ ಅನ್ನಿಸ್ತು. ಅದೇ ಗುರುವಾರ ಅವರ ಭೇಟಿಯೂ ಆಯ್ತು. ಅವರು ಸುಲಭಕ್ಕೆ ಓಕೆ ಹೇಳೋ ಹಾಗಿರಲಿಲ್ಲ. ನನ್ನ ಭರವಸೆಗಳು ಅವರ ಮನವೊಲಿಸಲಿಲ್ಲ. ಅವರು ಎದ್ದು ಹೋದ್ರು..ಆದ್ರೂ ನಾನು ಹಠ ಬಿಡಲಿಲ್ಲ…! ಮತ್ತೆ ಬಾಬಾ ಬಳಿಗೆ ಹೋದೆ. ಗುಲಾಬಿ ಇಟ್ಟೆ, ಬೇಡಿಕೊಂಡೆ. ಅದರ ಮುಂದಿನ ಗುರುವಾರ ನನ್ನಾಕೆಯ ಸಂಬಂಧಿಕರ ಸಹಾಯದಿಂದ ಅವರ ಮನೆಯಲ್ಲೇ ಅವಳ ಭೇಟಿ ಆಯ್ತು.. ಈ ಮಧ್ಯ ನಾನು ಪದೇಪದೇ ಅವಳಪ್ಪ ಅಮ್ಮನಿಗೆ ಫೋನ್ ಮಾಡಿ ಮನವೊಲಿಸೋ ಕೆಲಸ ಮಾಡ್ತಾನೇ ಇದ್ದೆ.

ಕೊನೆಗೊಂದು ಗುರುವಾರ ಅವರು ನಾನು ಕೆಲಸ ಮಾಡ್ತಿದ್ದ ಆಫೀಸಿನ ಬಾಸ್ ಮನೆಗೆ ಬಂದು, ನನ್ನನ್ನೂ ಕರೆಸಿ ಮಾತಾಡಿದ್ರು. ನನ್ನ ಬಗ್ಗೆ ಒಂದಷ್ಟು ಒಳ್ಳೇ ಅಭಿಪ್ರಾಯ ಮೂಡಿತ್ತು. ಅದರ ಮುಂದಿನ ಗುರುವಾರ ನನ್ನ ಗೆಳೆಯ ಅವಿನಾಶ್ ಜೊತೆ ಅವರ ಮನೆಗೇ ಹೋಗ್ಬಿಟ್ಟೆ…! ಸ್ವಲ್ಪ ಗೊಂದಲ,ಏರುಧ್ವನಿ ಆಯ್ತಾದ್ರೂ ತಕ್ಕಮಟ್ಟಿಗೆ ಕನ್ವಿನ್ ಆದ್ರು..! ಇದೆಲ್ಲದರ ಮಧ್ಯೆ ತಪ್ಪದೇ ಪ್ರತಿ ಗುರುವಾರ ಬಾಬಾ ದೇವಸ್ಥಾನಕ್ಕೆ ಹೋಗಿ ಬರ್ತಿದ್ದೆ… ಒಂದು ಗುರುವಾರ ಅವರಪ್ಪ ಅಮ್ಮ ನನ್ನ ಭೇಟಿ ಮಾಡಿ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ರು..!!! ಅದರ ಮುಂದಿನ ಗುರುವಾರವೇವ ನಮ್ಮ ಎಂಗೇಜ್ಮೆಂಟ್ ಆಯ್ತು… ಅದಾಗಿ ಎರಡು ವಾರಗಳ ನಂತರ 2012ರ ಮೇ 31ನೇ ತಾರೀಕು ನಮ್ಮಿಬ್ಬರ ಮದುವೆಯೂ ಆಗಿಹೋಯ್ತು… ಬಾಬಾ ತಮ್ಮ ಇರುವಿಕೆಯನ್ನ ನಂಗೆ ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ರು. ಅವರನ್ನ ನಂಬಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸ್ತೀನಿ ಅಂತ ನಿರೂಪಿಸಿದ್ರು..! ಹೀಗಿದ್ದಾಗ ನಾನವರನ್ನ ನಂಬದಿರಲು ಹೇಗೆ ಸಾಧ್ಯ..?


ದೇವರ ನಂಬಿಕೆ ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದ್ರೆ ಬಾಬಾ ಅವರನ್ನ ದೇವರು ಅಂತಲ್ಲದಿದ್ರೂ, ಗುರುಗಳಾಗಿ, ಒಂದು ಶಕ್ತಿಯಾಗಿ ನಾನು ನಂಬ್ತೀನಿ… ನನ್ನ ಜೀವನದ ಎಷ್ಟೋ ಹಂತಗಳಲ್ಲಿ ಅವರು ನನ್ನ ಕೈ ಹಿಡಿದಿದ್ದಾರೆ. ಕಷ್ಟಗಳನ್ನು ದೂರ ಮಾಡಿದ್ದಾರೆ… ‘ಓಂ ಸಾಯಿರಾಂ’ ಅನ್ನೋ ಎರಡು ಪದ ನನಗೆ ಇನ್ನಿಲ್ಲದ ಬಲ ಕೊಡುತ್ತೆ… ಅಂದಹಾಗೆ ನನ್ನ ಮಗ ಹುಟ್ಟಿದ್ದು ಸಹ ಕಳೆದ ವರ್ಷ ಫೆಬ್ರವರಿ ನಾಲ್ಕರ ಗುರುವಾರ… ಓಂ ಸಾಯಿರಾಂ…

Show More

Related Articles

2 thoughts on “ನಾನ್ಯಾಕೆ ಸಾಯಿಬಾಬಾ ಅವರನ್ನ ನಂಬ್ತೀನಿ..?”

Leave a Reply

Your email address will not be published. Required fields are marked *

Close