ಏನ್ ಸುದ್ದಿ?

ಮಳೆನೇ ಇವರ ಓಟು ಬ್ಯಾಂಕ್…!

ಪ್ರತಿ ವರ್ಷ ಇದೇ ಗೋಳು. ಮಳೆ ಬಂದಾಗಲೆಲ್ಲಾ ರಸ್ತೆಗಳು ಕೆರೆಗಳಾಗ್ತವೆ, ಮನೆಗೆ ನೀರು ನುಗ್ಗುತ್ತೆ, ಜನರ ಜೀವನ ಅಸ್ತವ್ಯಸ್ತ ಆಗುತ್ತೆ. ಟಿವಿ ಚಾನಲ್‌ಗಳು ಜಲಾವೃತ ಪ್ರದೇಶಗಳಿಂದ ಲೈವ್ ಮಾಡ್ತಾರೆ. ರಾಜಕಾರಣಿಗಳು ಹೋಗಿ ಪ್ಯಾಕೇಜ್ ಕೊಡ್ತಾರೆ..! ಪ್ರತಿ ವರ್ಷ ಇದೇ ಸೀನ್… ಯಾವ ಬದಲಾವಣೇನೂ ಇಲ್ಲ..! ಅಲ್ಲಾರೀ, ಈ ರಾಜಕಾರಣಿಗಳು ಅಂತ ಇದ್ದಾರಲ್ಲ, ಅವರನ್ನ ಅವರ ಕ್ಷೇತ್ರದಿಂದ ಆಯ್ಕೆ ಮಾಡಿ ಕಳಿಸೋ ಉದ್ದೇಶ ಆದ್ರೂ ಏನು.? ತಮ್ಮ ಕ್ಷೇತ್ರದ ಯಾವುದೇ ಸಮಸ್ಯೆಗೆ ಅವರು ಸ್ಪಂದಿಸಲಿ, ‌ನೋವು ಅವರಿಗೆ ಅರ್ಥ ಆಗಲಿ ಅಂತ ತಾನೇ… ಆದ್ರೆ ಈ ಮಳೆ ಸಮಸ್ಯೆ ಪ್ರತೀ ವರ್ಷಾನೂ ಆಗುತ್ತೆ ಅಂತಾದ್ರೆ ಅದಕ್ಕೊಂದು ಶಾಶ್ವತ ಪರಿಹಾರ ಅಂತ ಹುಡುಕೋಕೆ ಸಾಧ್ಯವಿಲ್ವಾ..? ವಿದೇಶಕ್ಕೆ ಹೋಗಿ ಅಲ್ಲಿ ಅದೆಂಗಿದೆ, ಇದೆಂಗಿದೆ ಅಂತ ನೋಡ್ಕೊಂಡ್ ಬರೋರಿಗೆ, ಅಲ್ಲಿ ಮಳೆ ಬಂದ್ರೆ ರಸ್ತೇಲಿ ನೀರು ಯಾಕೆ ನಿಲ್ಲಲ್ಲ ಅಂತಾನೂ ನೋಡ್ಕೊಂಡ್ ಬರೋಕ್ ಆಗಲ್ವಾ..?


ಬೆಂಗಳೂರು ನಗರ ದಿನೇದಿನೇ ಬೆಳೀತಾನೇ ಇದೆ. ವಿಶ್ವದ ಮೂಲೆಮೂಲೆಯ ಜನ ಇಲ್ಲಿದ್ದಾರೆ. ಅವರೆದುರು ನಮ್ಮ ಬೆಂಗಳೂರಿನ ಮಾನ ಹರಾಜು..! ಒಳಚರಂಡಿ ವ್ಯವಸ್ಥೆ ಸರಿ ಇಲ್ವಾ, ಬಿಬಿಎಂಪಿಯವರು ಅದನ್ನು ಪಟ್ಟು ಹಿಡಿದು ಸರಿ ಮಾಡಿಸ್ಬೇಕು ತಾನೇ..? ಆ ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ಅಂತೂ ಮಳೆ ಬಂದಾಗೆಲ್ಲಾ ಮುಳುಗಿ ಹೋಗುತ್ತೆ. ಆದ್ರೆ ಪ್ರತಿ ವರ್ಷ ಅದೇ ಡ್ರಾಮಾ ನಡೆಯುತ್ತೆ ಬಿಟ್ರೆ ಯಾರೂ ಅದಕ್ಕೊಂದು ಶಾಶ್ವತ ಪರಿಹಾರ ಯೋಚನೆ ಮಾಡೋದೇ ಇಲ್ಲ. ಮನೆಮನೆಗೆ ಹೋಗಿ ಸಾವಿರ ಪರಿಹಾರ ಕೊಟ್ರೆ ಮನೆಯವರೆಲ್ಲಾ ನಮಗೇ ಓಟು ಹಾಕ್ತಾರೆ ಅಂತ ಯೋಚನೆ ಮಾಡುವಾಗ, ಶಾಶ್ವತ ಪರಿಹಾರ ಆದ್ರೂ ಯಾಕೆ ಮಾಡ್ತಾರೆ ಹೇಳಿ.? ಮಳೆಯ ನೀರೂ ಅವರಿಗೆ ಓಟು ಬ್ಯಾಂಕ್ ಇದ್ದಂಗೆ. ಮಳೆ‌ ಬರಬೇಕು,ಮನೆ ಮುಳುಗಬೇಕು, ರಾಜಕಾರಣಿಗಳು ಹೋಗಿ ಕೈಮುಗಿದು ಕೈಗೆ ಒಂದಷ್ಟು ಸಾವಿರ ಕೊಟ್ಟು ಬರಬೇಕು. ಅವಾಗ್ಲೇ ಅಲ್ವಾ ಒಂದಷ್ಟು ಓಟು ಕನ್ವರ್ಟ್ ಆಗೋದು..!


ರಾತ್ರಿ ಸುರಿದ ಮಳೆಯೇನು ಸಣ್ಣ ಮಳೆಯಲ್ಲ, ರಣಚಂಡಿ ಮಳೆಬಾದು. ರಚ್ಚೆ ಹಿಡಿದು ಬೆಂಗಳೂರಿನ ಬೆವರಿಳಿಸಿದೆ ಆ ಒಂದು ಮಳೆ. ಆದ್ರೆ, ವಿಶ್ವದ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದ ಬೆಂಗಳೂರು ಆ ಒಂದು ಮಳೆಗೆ ಮುಳುಗಿ ಹೋದ್ರೆ ಎಲ್ಲಿಯ ಸಿಲಿಕಾನ್ ಸಿಟಿ, ಎಲ್ಲಿಯ ಐಟಿ ಹಬ್..?
ಮಳೆ ನಿಂತು ಹೋದ ಮೇಲೆ ಈ ನಾಟಕಗಳು ಮುಗಿದು ಹೋಗುತ್ತೆ. ಮುಂದಿನ ಮಳೆಯ ತನಕ ಯಾರಿಗೂ ಅದರ ನೆನಪೂ ಆಗಲ್ಲ. ಮುಂದಿನ ವರ್ಷ ನೋಡ್ಕೊಳೋಣ ಅನ್ಕೊಂಡು ಸುಮ್ಮನಾಗ್ತಾರೆ. ಮತ್ತೆ ಮುಂದಿನ ವರ್ಷ ಅದೇ ಗೋಳು


ಅದು ಮುಗೀತಾ ಇದ್ದ ಹಾಗೆ ಮತ್ತದು ಇನ್ನೊಂದು ವರ್ಷಕ್ಕೆ ಮುಂದೂಡಿಕೆ. ಅಷ್ಟರೊಳಗೆ ಬರುವ ಎಲೆಕ್ಷನ್‌ನಲ್ಲಿ ಜನ ಅಲ್ಲಿನ ನಾಯಕನನ್ನ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿರ್ತಾರೆ..! ಅಲ್ಲಿಗೆ ಹೋದ್ಮೇಲೆ ಅವರ ಮನೆಗಳು ಭದ್ರವಾಗುತ್ತೆ ಬಿಟ್ರೆ, ಮಳೆಗೆ ಮುಳುಗುವ ಮನೆಗಳು ಛಿದ್ರ..!!!
ಓಟು ಕೇಳೋಕೆ ಕೈ ಮುಗಿದುಕೊಂಡು ಬರ್ತಾರೆ… ಗ್ರಹಚಾರ ಬಿಡಿಸಿ. ಈ ಸಲ ಯಾಮಾರಬೇಡಿ. ಈಗ ಯಾಮಾರಿದ್ರೆ ಇನ್ನು ಐದು ವರ್ಷ ಕೈಗೆ ಸಿಗಲ್ಲ ಇವರುಗಳು… ಮಳೆಗೆ ಮುಳುಗ್ತಿರೋ ಬೆಂಗಳೂರಿಗರ ಬದುಕು ಸರಿ ಮಾಡ್ಕೊಳೋಣ…

Show More

Related Articles

Leave a Reply

Your email address will not be published. Required fields are marked *

Close