ಸಿನಿ ಸುದ್ದಿ

ಬಿಗ್ ಬಾಸ್ ಶೋ ಹೆಂಗೆ ನಡೆಯುತ್ತಾ ಗೊತ್ತಾ..?

-ಕಿರಿಕ್ ಕೀರ್ತಿ
ಬಿಗ್ ಬಾಸ್ ಶೋ ಹೆಂಗೆ ನಡೆಯುತ್ತಾ ಗೊತ್ತಾ..? ಬಿಗ್ ಬಾಸ್ ಸ್ಕ್ರಿಪ್ಟೆಡ್ಡಾ..? ಅಂದ್ರೆ ಅವರು ಹೇಳಿಕೊಟ್ಟ ಹಾಗೆ ಅಲ್ಲಿರೋ ಸ್ಪರ್ಧಿಗಳು ಆಡಬೇಕಾ..? ಇದು ತುಂಬಾ ಜನಕ್ಕಿರುವ ಪ್ರಶ್ನೆ… ಒಂದು ಗಂಟೆ ಟಿವಿ ಎದುರು ಕೂತು ಬಿಗ್ ಬಾಸ್ ನೋಡುವ ಪ್ರತಿ ವಿಕ್ಷಕನಿಗೂ ಹೀಗನ್ನಿಸುವುದರಲ್ಲಿ ತಪ್ಪಿಲ್ಲ. ಅದಕ್ಕೆ ಕಾರಣ ಸಹ ಆ ಒಂದು ಗಂಟೆಯ ಕಾರ್ಯಕ್ರಮ. ದಿನವಿಡೀ ನಡೆಯೋದನ್ನೆಲ್ಲಾ ಒಂದು ಗಂಟೆಯಲ್ಲಿ ತೋರಿಸಿದಾಗ ಇಂತಹ ಅನುಮಾನಗಳು ಸಹಜವಾಗಿಯೇ ಪ್ರತಿಯೊಬ್ಬರನ್ನೂ ಕಾಡುತ್ತೆ.. ಆದ್ರೆ ಸ್ಕ್ರಿಪ್ಟೆಡ್ಡಾ ಅನ್ನೋ ಪ್ರಶ್ನೆಗೆ ಉತ್ತರ.. ಅಲ್ಲ, ಅದು ಸ್ಕ್ರಿಪ್ಟೆಡ್ ಅಲ್ಲ..!!!

ಬಿಗ್ ಬಾಸ್ ಮನೆಯಲ್ಲಿ ದಿನದ 24 ಗಂಟೆಯೂ ಅಲ್ಲಿರುವ ಅಷ್ಟೂ ಕ್ಯಾಮರಾಗಳು ಅಲ್ಲಿರುವ ಸ್ಪರ್ಧಿಗಳ ಚಟುವಟಿಕೆಯನ್ನು ಸೆರೆಹಿಡೀತಾ ಇರುತ್ತೆ. ಅಷ್ಟೂ ಕ್ಯಾಮರಾಗಳು ಸೆರೆಹಿಡಿದ ಅಷ್ಟೂ ದೃಶ್ಯಗಳನ್ನು ಒಂದು ಗಂಟೆಗೆ ಎಡಿಟ್ ಮಾಡಿ ವೀಕ್ಷಕನ ಎದುರು ಇಡಲಾಗುತ್ತೆ. ಆ ಒಂದು ಗಂಟೆಯೊಳಗೆ ಎಲ್ಲವನ್ನೂ ತೋರಿಸಲು ಸಾಧ್ಯವಿಲ್ಲದಿರುವುದರಿಂದ ಮಹತ್ವದ ಹಾಗೂ‌ ಮನರಂಜನೆಗೆ ಪೂರಕವೆನಿಸುವ ಘಟನೆಗಳನ್ನು ನೀವು ಆ ಒಂದು ಗಂಟೆಯಲ್ಲಿ ನೋಡ್ತೀರಿ. ಹಾಗಾಗಿ ಕೆಲವರು ಆಡುವ ರೀತಿ ನೋಡಿ ನಿಮಗೆ ಅದು ಹೇಳಿಕೊಟ್ಟು ಮಾಡಿಸಿದ್ದೇನೋ ಅನಿಸಿಬಿಡುತ್ತೆ..!

ಉದಾಹರಣೆಗೆ, ಒಬ್ಬ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಗೆ ದಿನದ ಪ್ರತಿ ಗಂಟೆಗೊಮ್ಮೆ ಯಾವುದೋ ವಿಚಾರದಲ್ಲಿ ಕಾಲೆಳೀತಾನೇ ಇರ್ತಾನೆ. ಕಾಲೆಳೆಸಿಕೊಂಡ ಸ್ಪರ್ಧಿ ಅವನಿಗೆ ಪ್ರತಿ ಸಲ ಶಾಂತರೀತಿಯಿಂದಲೇ ಅದಕ್ಕೆ ಪ್ರತಿಕ್ರಿಯೆ ನೀಡಿರ್ತಾನೆ. ಹೀಗೆ ಹತ್ತಾರು ಬಾರಿ ಆ ದಿನದಲ್ಲಿ ನಡೆದಿರುತ್ತೆ. ಯಾವಾಗ ಅದು ಮಿತಿಮೀರುತ್ತೋ ಆಗ ಆ ಸ್ಪರ್ಧಿ ಅವನ ಮೇಲೆ ಎಗರಿ ಬೀಳ್ತಾನೆ. ಆದ್ರೆ ಒಂದು ಗಂಟೆಯೊಳಗೆ ಹತ್ತಾರು ಬಾರಿ ನಡೆದ ಚರ್ಚೆ ತೋರಿಸಲು ಸಾಧ್ಯವಿಲ್ಲ. ಕೊನೆಯ ಬಾರಿ ಅದೇ ವಿಚಾರಕ್ಕೆ ಗಲಾಟೆ ಆದಾಗ ಅದು ಆ ಒಂದು ಗಂಟೆಯೊಳಗೆ ಬಂದು ಕೂರುತ್ತೆ. ನೋಡಿದವರಿಗೆ,ಯಾಕಪ್ಪಾ ಅಷ್ಟಕ್ಕೇ ಇಷ್ಟು ಎಗರಾಡ್ತಾನೆ.? ಇದೆಲ್ಲಾ ಸ್ಕ್ರಿಪ್ಟೆಡ್ ಅನ್ಸುತ್ತೆ ಅಷ್ಟೆ..!

ಹೀಗೆ ಹತ್ತು ಹಲವು… ಪ್ರತಿ ಸ್ಪರ್ಧಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತೆ. ಬೇರೆಬೇರೆ ವ್ಯಕ್ತಿತ್ದವರನ್ನೇ ಆ ಮನೆಯೊಳಗೆ ಹಾಕಿರ್ತಾರೆ. ಪ್ರತಿ ವಿಷಯಕ್ಕೂ, ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯಲ್ಲೇ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ನೋಡುವ ವೀಕ್ಷಕನಿಗೆ ಇದ್ಯಾಕೆ ಹೀಗಾಡ್ತಾರೆ ಇದೆಲ್ಲಾ ಬಿಗ್ ಬಾಸ್ ಹೇಳಿಕೊಟ್ಟಂಗಿದೆ ಅನ್ಸುತ್ತೆ ಅಷ್ಟೆ…

ಬಿಗ್ ಬಾಸ್‌ನಲ್ಲಿ ಏನು ಮಾಡಬೇಕು ಅನ್ನೋದನ್ನು ಪತ್ರ ಮುಖಾಂತರ ತಿಳಿಸುತ್ತಾರೆ. ಅಂದ್ರೆ ಟಾಸ್ಕ್‌ಗಳು, ಗೇಮ್‌ಗಳು, ಚಟುವಟಿಕೆಗಳು ಇಂತವು. ಅದನ್ನು ಒಬ್ಬರು ಬಂದು ಲಿವಿಂಗ್ ರೂಮಲ್ಲಿ ಓದ್ತಾರೆ. ಆ ಚಟುವಟಿಕೆಯನ್ನು ಹೇಗೆ ಮಾಡಬೇಕು ಅನ್ನೋದು ಆಯಾ ಸ್ಪರ್ಧಿಗಳಿಗೆ ಬಿಟ್ಟಿದ್ದು…! ಅಂದ್ರೆ ಏನು ಮಾಡಬೇಕು ಅಂತ ಹೇಳ್ತಾರೆ, ಆದ್ರೆ ಹೇಗೆ ಮಾಡಬೇಕು ಅಂತ ಹೇಳಲ್ಲ…


ಆ ಒಂದು ಗಂಟೆಯಿಂದಾಗಿ ಹಲವು ಬಾರಿ ಸ್ಪರ್ಧಿಯ ಪರ-ವಿರೋಧ ಅಭಿಪ್ರಾಯ ಮೂಡಬಹುದು. ಅದು ಸಹಜ ಸಹ… ಅದು ಕೆಲವರಿಗೆ ಪ್ಲಸ್ ಆಗುತ್ತೆ, ಕೆಲವರಿಗೆ ಮೈನಸ್… ಒಟ್ಟಾರೆ ಹೇಳೋದಾದ್ರೆ ಇದೊಂದು ವ್ಯಕ್ತಿತ್ವ ಪ್ರದರ್ಶನದ ಶೋ. ಇಲ್ಲಿ ಯಾರೂ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ಹಾಗೆ ಯಾರೇ ಹೇಳಿಕೊಟ್ಟರೂ ಮಾಡಲು ಸಿದ್ಧರಿರೋದಿಲ್ಲ..! ಅದನ್ನೂ ಇಡೀ ರಾಜ್ಯದ ಜನ ಕೂತು ನೋಡ್ತಿರ್ತಾರೆ ಅನ್ನೋ ಅರಿವು ಅವರಿಗಿರುತ್ತೆ. ಅದನ್ನು ಮೀರಿ ಅವರು ತಮ್ಮ ಇಮೇಜ್ ಡ್ಯಾಮೇಜ್ ಮಾಡ್ಕೊಂಡ್ರೆ ಅದು ಅವರ ತಪ್ಪೇ ಹೊರತು, ಬಿಗ್‌ಬಾಸ್‌ದಲ್ಲ..!  ಸೀಸನ್ 5 ಈಗ ತಾನೇ ಶುರುವಾಗಿದೆ. ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರೂ ಹೋಗಿದ್ದಾರೆ. ನೋಡೋಣ ಈ ಸಲ ಹೆಂಗಿರುತ್ತೆ ಅಂತ.

Show More

Related Articles

Leave a Reply

Your email address will not be published. Required fields are marked *

Close