ರಾಜಕೀಯ

ಯಾರು ಹಿತವರು ನಿಮಗೆ ಈ ಮೂವರೊಳಗೆ..?

ರಾಜ್ಯದಲ್ಲಿ ಚುನಾವಣಾ ಕಾವು ದಿನೇದಿನೇ ಏರ್ತಾ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ರೊಚ್ಚಿಗೆದ್ದು ಜನರ ಕೆಲಸ ಮಾಡ್ತಾ ಇವೆ. ದಲಿತರ ಮನೆಗೆ ಊಟಕ್ಕೆ ಹೋಗೋದ್ರಿಂದ ಹಿಡಿದು ಅವರ ಮಕ್ಕಳ ಶರ್ಟಿಗೆ ಬಟನ್ ಹಾಕ್ಕೊಡೋ ತನಕ ರಾಜಕೀಯದಾಟ ನಡೀತಿದೆ. ಈ ಮಧ್ಯದಲ್ಲಿ ಅವ್ರಿಗ್ ಎಷ್ಟ್ ಸೀಟ್ ಬರುತ್ತೆ, ಇವ್ರಿಗೆಷ್ಟ್ ಬರುತ್ತೆ ಅನ್ನೋ ಕುಲ್ಡಾಮಿಲ್ಡಿ ಲೆಕ್ಕಾಚಾರ ಬೇರೆ. ಹೀಗಿರುವಾಗ Karnaataka.com ತನ್ನ ಮೊದಲ ಸುದ್ದಿಯ ಸಲುವಾಗಿ ಕಿರಿಕ್ ಕೀರ್ತಿ ಪುಟದಲ್ಲಿ ಒಂದು ಪೋಲ್ ನಡೆಸಿತ್ತು. ಅದೇ ‘ಮುಂದಿನ ಮುಖ್ಯಮಂತ್ರಿಯಾಗಲು ನಿಮ್ಮ ಆಯ್ಕೆ ಯಾರು.?’

ಸೋಶಿಯಲ್ ನೆಟ್ವರ್ಕ್ ಇವತ್ತು ಜನರ ಜೀವನದ ಅವಿಭಾಜ್ಯ ಅಂಗ. ಬೆಳಗೆದ್ದು ದೇವರ ಮುಖ ನೋಡದಿದ್ರೂ ಫೇಸ್‌ಬುಕ್ಕಲ್ಲಿ ನಿನ್ನೆ ರಾತ್ರಿ ಹಾಕಿದ್ದ ಫೋಟೋಗೆ ಎಷ್ಟು ಲೈಕ್ ಬಂತು ಅಂತ ನೋಡೋ ಕಾಲ. ಹೀಗಿರುವಾ ಅಂತಹ ಫೇಸ್‌ಬುಕ್ ಪ್ರಪಂಚದ ಜನರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಾರನ್ನು ನೋಡಲು ಇಷ್ಟ ಅನ್ನೋದಕ್ಕೆ ಉತ್ತರ ಸಿಕ್ಕಿದೆ.

ಕುಮಾರಸ್ವಾಮಿ ಯುವಕರ ಫೇವರೇಟಾ..?


ಹೀಗೊಂದು ಪ್ರಶ್ನೆ ಕಾಡದೇ ಇರದು. ರಾಷ್ಟ್ರೀಯ ಪಕ್ಷಗಳ ಕನ್ನಡ ಹಾಗೂ ರೈತ ವಿರೋಧಿ ಧೋರಣೆಗಳು, ಜನರು ಪ್ರಾದೇಶಿಕ ಪಕ್ಷದೆಡೆಗೆ ಒಲವು ತೋರಿಸುವಂತೆ ಮಾಡಿರಬಹುದು. ಅದರಲ್ಲೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಆಡಳಿತ ರಾಜ್ಯದ ಜನರಿಗೆ ಖುಷಿ ಕೊಟ್ಟಿತ್ತು. ಹಾಗಾಗಿ ಮತ್ತೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ನಾಡು,ನುಡಿ,ರೈತರ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇರಬಹುದು.

ಎಲ್ಲಾ ಓಕೆ… ಸಿದ್ರಾಮಯ್ಯನವರನ್ನು ಬೇಡ ಅಂದಿದ್ಯಾಕೆ..?


ಹಾಲಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಹಿಂದೆಬಿದ್ದಿದ್ದಾರೆ ಅನ್ನೋದು ಸತ್ಯ. ಕಾರಣ ಉಳಿದ ಪಕ್ಷಗಳವರು ಮುಂದಿರುವುದೋ, ಅಥವಾ ಜಾಲತಾಣಗಳಲ್ಲಿ ಛಾಪು ಮೂಡಿಸುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದಿಯೋ ಅರ್ಥವಾಗ್ತಿಲ್ಲ. ಆದ್ರೆ ಯುವ ಸಮೂಹ ಮುಖ್ಯಮಂತ್ರಿಗಳ ರೇಸಿನಲ್ಲಿ ಸಿದ್ದರಾಮಯ್ಯನವರನ್ನು ಸ್ವಲ್ಪ ದೂರ ಇಟ್ಟಿರುವುದು ಸ್ಪಷ್ಟ. ಇತ್ತಿಚಿನ ಹಲವು ಜನಪರ ಯೋಜನೆಗಳು, ಭಾಗ್ಯಗಳು ಸಿದ್ದರಾಮಯ್ಯನವರ ಪರ ಅಲೆ ಬೀಸಿದ್ದರೂ ಸಹ ಈ ಸಮೀಕ್ಷೆಯಲ್ಲಿ ಸಿದ್ದಣ್ಣ ಸ್ವಲ್ಪ ಹಿಂದೆ ಬಿದ್ದಿದ್ದಾರೆ ಅನ್ನೋದಕ್ಕೆ ಸಾಕ್ಷಿ ಫಲಿತಾಂಶ.

ಯಡ್ಯೂರಪ್ಪ ಇರಲಿ ಬಿಡಪ್ಪ..!


ಬಿಜೆಪಿ ನಾಯಕ ಯಡ್ಯೂರಪ್ಪ ಸಹ ಮುಂದಿನ ಮುಖ್ಯಮಂತ್ರಿಗಳ ಸಮೀಕ್ಷೆಯಲ್ಲಿ ಕುಮಾರಸ್ವಾಮಿಯವರಿಗೆ ‘ನೆಕ್ ಟು ನೆಕ್’ ಹೋರಾಟ ಕೊಟ್ರು. ಸಾಕಷ್ಟು ಹಂತಗಳಲ್ಲಿ ಕುಮಾರಸ್ವಾಮಿಯವರಿಗಿಂತ ಯಡ್ಯೂರಪ್ಪನವರೇ ಮುಂದಿದ್ರು ಸಹ. ಈ ಹಿಂದೆ ಕೆಲವು ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಯಡ್ಯೂರಪ್ಪನವರು ಕೆಲವು ಕನ್ನಡಪರ ವಿಚಾರದಲ್ಲಿ ಮೌನ ತಾಳಿದ್ದು ಜನರ ಕೋಪಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಕ್ಷಗಳ ಧೋರಣೆಗಳೇನೇ ಇದ್ದರೂ ರಾಜ್ಯದಲ್ಲಿ, ನಾಡು ನುಡಿಯ ವಿಚಾರದಲ್ಲಿ ಯಡ್ಯೂರಪ್ಪನವರು ಧ್ವನಿ ಎತ್ತಬೇಕಿದೆ. ಯಡ್ಯೂರಪ್ಪನವರಿಗೆ ಓಟು ಹಾಕಿದವರು ಕನ್ನಡ ವಿರೋಧಿಗಳು ಎಂಬರ್ಥದ ಹತ್ತಾರು ಕಮೆಂಟುಗಳು ಈ ಲೈವಲ್ಲಿ ಕಂಡುಬಂತು..

ಹೇಗಾಯ್ತು ಈ ಪೋಲ್..?
ಕಿರಿಕ್ ಕೀರ್ತಿ ಫೇಸ್‌ಬುಕ್ ಪುಟದಲ್ಲಿ ಸೆಪ್ಟೆಂಬರ್ 20ರಂದು ರಾತ್ರಿ ಸುಮಾರು 90 ನಿಮಿಷಗಳ ಕಾಲ ಈ ಸಮೀಕ್ಷೆ ನಡೀತು. ಸಾವಿರಾರು ಜನ ತಮ್ಮ ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಗೆ ಫೇಸ್‌ಬುಕ್ ಎಮೋಟಿಕಾ ಮೂಲಕ ಮತ ಹಾಕಿದ್ರು. ಅಂತಿಮವಾಗಿ ಕುಮಾರಸ್ವಾಮಿಯವರು 8455 ಮತಗಳನ್ನು ಪಡೆದ್ರು. ಎರಡನೇ ಸ್ಥಾನದಲ್ಲಿದ್ದ ಯಡ್ಯೂರಪ್ಪನವರು 7522 ಮತ ಪಡೆದ್ರು. ಇನ್ನೂ ಮೂರನೇ ಸ್ಥಾನದಲ್ಲಿ ಸಿದ್ದರಾಮಯ್ಯನವರು 1882 ಮತ ಪಡೆದರು.

ಉಪೇಂದ್ರ ಅವರ ಹೆಸರು ಸೇರಿಸಿ…


ಸಮೀಕ್ಷೆಯ 90 ನಿಮಿಷದ ಅವಧಿಯಲ್ಲಿ ನೂರಾರು ಜನ ಪ್ರಜಾಕಾರಣದ ಉಪೇಂದ್ರ ಅವರೂ ಮುಖ್ಯಮಂತ್ರಿಯಾಗಬೇಕು ಎಂಬಂತೆ ಕಮೆಂಟ್ ಮಾಡುತ್ತಲೇ ಇದ್ರು. ಬದಲಾವಣೆ ಆಗಬೇಕು ಅಂದ್ರೆ ಉಪ್ಪಿ ಮುಖ್ಯಮಂತ್ರಿ ಆಗಬೇಕು ಅನ್ನೋದು ಬಹಳಷ್ಟು ಜನರ ಅಭಿಪ್ರಾಯವಾಗಿತ್ತು.

ಫೇಸ್‌ಬುಕ್‌ನಲ್ಲಿ ಇರೋರೆರೆಲ್ಲಾ ಮತದಾರರೇ. ಹೀಗಿರುವಾಗ ದೊಡ್ಡ ಮಟ್ಟದ ಜನಾಭಿಪ್ರಾಯ ಇದರಿಂದ ಗೊತ್ತಾಗುತ್ತಾದ್ರೂ, ಇವೆಲ್ಲಾ ನಿಜವಾದ ಓಟುಗಳಾಗಿ ಬದಲಾಗುತ್ತವಾ ಅನ್ನೋದೇ ಪ್ರಶ್ನೆ. ನಾಯಕ ಇಷ್ಟವಾದ ಮಾತ್ರಕ್ಕೆ ತನ್ನ ಕ್ಷೇತ್ರದ ಅಭ್ಯರ್ತಿಯೂ ಇಷ್ಟವಾಗಬೇಕೆಂಬ ಕಾನೂನು ಇಲ್ವಲ್ಲ…! ದಿನಗಳು ದೂರವಿಲ್ಲ, ನೋಡೋಣ ಏನೇನಾಗುತ್ತೆ…

Poll URL :https://www.facebook.com/kirikkeerthi/videos/1793063010721156/

Show More

Leave a Reply

Your email address will not be published. Required fields are marked *

Close