ಏನ್ ಸುದ್ದಿ?

ಇನ್ಮುಂದೆ `ಹಾಯ್ ಬೆಂಗಳೂರ್’ ಬರಲ್ವಾ..!?

ಹಾಯ್ ಬೆಂಗಳೂರ್… ಬರೋಬ್ಬರಿ 22 ವರ್ಷ ಕರ್ನಾಟಕದ ಟ್ಯಾಬ್ಲಾಯ್ಡ್ ಪ್ರಪಂಚದಲ್ಲಿ ಮೆರೆದ ಪತ್ರಿಕೆ. ರವಿ ಬೆಳಗೆರೆಯವರ ಸಾರಥ್ಯದಲ್ಲಿ ಬರುವ ಈ ಪತ್ರಿಕೆ ‘ಪೆನ್ನು ಕತ್ತಿಗಿಂತ ಹರಿತವಾದದ್ದು’ ಅನ್ನೋದನ್ನ ಅಕ್ಷರಶಃ ನಿಜ ಮಾಡಿದ ಪತ್ರಿಕೆ. ಆದ್ರೆ ಇಂತಹ ಹಾಯ್ ಬೆಂಗಳೂರ್ ಯುಗ ಅಂತ್ಯವಾಗಲಿದಿಯೇ..? ಹೀಗೊಂದು ಅನುಮಾನ ಹುಟ್ಟಲು ಕಾರಣ ಅವರು ವನ್ ಇಂಡಿಯಾಗೆ ನೀಡಿರುವ ಸಂದರ್ಶನ..!

ಹೌದು, ವನ್ ಇಂಡಿಯಾ ಜೊತೆಗೆ ಮಾತನಾಡಿರುವ ರವಿ ಬೆಳಗೆರೆಯವರು, ಹಾಯ್ ಬೆಂಗಳೂರ್ ನಿಲ್ಲಿಸುವ ಬಗ್ಗೆ ಮಾತಾಡಿದ್ದಾರೆ. ‘ನನಗೂ 60 ವರ್ಷವಾಯ್ತು. ಇನ್ನೂ ಎಷ್ಟು ದಿನ ಅಂತ ಬರೀಲಿ. ನನ್ನ ಶೆಲ್ಫಲ್ಲಿ ಇರೋ ಪುಸ್ತಕಗಳನ್ನು ಓದೋಕೇ ನಂಗೆ ಇನ್ನೂ 150 ವರ್ಷ ಬೇಕು. ನಾನು ಅದನ್ನೆಲ್ಲಾ ಓದಬೇಕು. ಅದೆಷ್ಟೋ ಪುಸ್ತಕಗಳನ್ನು ತರ್ಜುಮೆ ಮಾಡಬೇಕಿದೆ. ಜೊತೆಗೆ ಒಂದಷ್ಟು ಕ್ವಾಲಿಟಿ ಬರಹಗಳನ್ನ ಓದುಗನಿಗೆ ತಲುಪಿಸಬೇಕಿದೆ. ಹೀಗಿರುವಾಗ ನನಗೆ ‘ಹಾಯ್ ಬೆಂಗಳೂರ್’ ಕಡೆ ಗಮನ ಹರಿಸೋದು ಕಷ್ಟ ಸಾಧ್ಯ. ಹಾಗಾಗಿ ಅದನ್ನು ಶೀಘ್ರದಲ್ಲೇ ನಿಲ್ಲಿಸುತ್ತೇನೆ ಅಂತ ವನ್ ಇಂಡಿಯಾದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹಾಯ್ ಬೆಂಗಳೂರ್ ನಿಲ್ಲಬಹುದು, ಆದ್ರೆ ಯುವಕ ಯುವತಿಯರ ನೆಚ್ಚಿನ ‘ಓ ಮನಸೇ’ ಮುಂದುವರಿಯಲಿದೆಯಂತೆ. ‘ಓ ಮನಸೇ’ಗೆ ಬೆಳಗೆರೆಯವರ ಮಗಳು ಭಾವನಾ ಸಾಥ್ ಕೊಡ್ತಾರಂತೆ. ಹಾಗಾಗಿ ‘ಓ ಮನಸೇ’ ಮನಸುಗಳಿಗೆ ಇನ್ನಷ್ಟು ಹತ್ತಿರವಾಗಲಿದೆ.

ಇತ್ತೀಚೆಗೆ ಫೇಸ್‌ಬುಕ್ಕಲ್ಲಿ ತುಂಬಾ ಆಕ್ಟಿವ್ ಆಗಿರುವ ರವಿ ಬೆಳಗೆರೆಯವರು ಆಗಾಗ ಹಲವಾರು ವಿಷಯಗಳ ಬಗ್ಗೆ ವೀಡಿಯೋ ಮಾಡ್ತಿರ್ತಾರೆ. ದಾಂಡೇಲಿ ಸಮೀಪದ ಜೋರ್ಡಾದಲ್ಲಿ ಹೆಚ್ಚಿನ ಸಮಯ ಕಳೀತಿದ್ದಾರೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಇಚ್ಚಿಸುತ್ತಿದ್ದಾರೆ. ಮೊಮ್ಮಕ್ಕಳ ಜೊತೆ ಕಾಲ ಕಳೆಯಲು ಬಯಸುತ್ತಿದ್ದಾರೆ. ಇದೆಲ್ಲದರ ನಡುವೆ ‘ಹಾಯ್ ಬೆಂಗಳೂರ್’ ಬೇಕಾ ಅನ್ನೋ ಪ್ರಶ್ನೆ ಅವರನ್ನೂ ಕಾಡಿರಬಹುದು..!


ಒಟ್ಟಾರೆ ಹೇಳೋದಾದ್ರೆ, ರಾಜಕಾರಣಿಗಳಿಗೆ ಭಯ ಹುಟ್ಟಿಸಿದ್ದ, ಕ್ರೈಂ ಪ್ರಪಂಚವನ್ನು ತೆರೆದಿಟ್ಟಿದ್ದ, ನೇರಾನೇರಾ ಬರಹಗಳಿಂದ ಸಂಚಲನ ಮೂಡಿಸಿದ್ದ ‘ಹಾಯ್ ಬೆಂಗಳೂರ್’ ಇನ್ನು ಬರಿಯ ಇತಿಹಾಸ.!? ರವಿ ಬೆಳಗೆರೆಯವರ ಅಭಿಮಾನಿಗಳು, ಹಾಗಾಗದಿರಲಿ ಅಂತಿದ್ದಾರೆ..ಕಾದು ನೋಡೋಣ ಅಧಿಕೃತವಾಗಿ ಅವರೇ ಬರೆಯುವ ತನಕ…

Show More

Related Articles

Leave a Reply

Your email address will not be published. Required fields are marked *

Close