ಒಳ್ಳೆ ವಿಷ್ಯ

ಕಿರಿಕ್ ಕೀರ್ತಿ ಕನ್ನಡದ ಹೆಸರಲ್ಲಿ ದುಡ್ಡು ಮಾಡ್ತಿದ್ದಾನಾ..!?

ನಾನೂ ಸೇರಿದಂತೆ ಸಾಕಷ್ಟು ಜನರ ಬಗೆಗಿರುವ ಆರೋಪ ‘ ಕನ್ನಡದ ಹೆಸರಲ್ಲಿ ಸಕತ್ ದುಡ್ಡು ಮಾಡ್ತಾರೆ’ ಅನ್ನೋದು..! ಯಾರು ಏನ್ಮಾಡ್ತಿದ್ದಾರೋ ಗೊತ್ತಿಲ್ಲ, ಆದ್ರೆ ನನಗೆ ಆ ಮಾತು ಕೇಳಿದಾಗ ಕೋಪ ನೆತ್ತಿಗೇರುತ್ತೆ, ಒಂದು ಕಡೆ ತುಂಬಾ ಬೆಜಾರಾಗುತ್ತೆ..! ಕಾರಣ, ಆ ಒಂದು ಸಣ್ಣ ಕಲ್ಪನೆಯೂ ನನಗಿಲ್ಲದಿರುವುದು. ನಿಜಕ್ಕೂ ಕನ್ನಡದ ಹೆಸರಲ್ಲಿ ಕೆಲವರು ದುಡ್ಡು ಮಾಡ್ತಿದ್ದಾರಾ..? ಇರಬಹುದು, ಕನ್ನಡವನ್ನು ಕೆಲವರು ದುಡ್ಡಿನ ಮಾರ್ಗ ಮಾಡಿಕೊಂಡಿರಬಹುದು. ಆದ್ರೆ ನನಗೆ ಆ ತರಹದ ಆಲೋಚನೆ ಈ ಕ್ಷಣದವರೆಗೆ ಬಂದಿಲ್ಲ, ಬರೋದೂ ಇಲ್ಲ..! ಕನ್ನಡದ ಹೆಸರಲ್ಲಿ ದುಡ್ಡು ಮಾಡೋದು ತನ್ನ ತಾಯಿಯನ್ನು ಬಳಸಿಕೊಂಡು ದುಡ್ಡು ಮಾಡೋದಕ್ಕೆ ಸಮ ಅಂತಲೇ ನಂಬಿರುವವನು ನಾನು…

ನನ್ನನ್ನು ‘ಕನ್ನಡ ಹೋರಾಟಗಾರ’ ಅಂತ ಕರೆಯೋದೇ ನನಗಿಷ್ಟ ಆಗದೇ ಇರುವ ವಿಚಾರ. ನನ್ನ ಅಮ್ಮನಿಗೆ ಯಾರಾದ್ರೂ ಕೆಟ್ಟದಾಗಿ ಮಾತಾಡಿದ್ರೆ ನಾನು ಅದರ ಬಗ್ಗೆ ಧ್ವನಿ ಎತ್ತಿದ್ರೆ ‘ ತಾಯಿ ಹೋರಾಟಗಾರ’ ಅಂತ ಕರೀತಾರಾ..? ಕನ್ನಡವನ್ನು ಅಮ್ಮ ಅಂತ ಕರೀವಾಗ, ಆ ಅಮ್ಮನಿಗೆ ತೊಂದರೆಯಾದಾಗ ಆಕೆಯ ಪರವಾಗಿ ಧ್ವನಿ ಎತ್ತೋನು ಹೋರಾಟಗಾರ ಹೇಗಾಗ್ತಾನೆ..? ನಾನು ಪ್ರೀತಿಸುವ ಭಾಷೆಗೆ ನನ್ನ ಋಣ ತೀರಿಸುವ ಪರಿ ಅದು.. ನನ್ನನ್ನು ಹೆತ್ತವಳು ತುಳು ತಾಯಿಯಾದ್ರೆ, ನನಗೆ ಮಾಧ್ಯಮದಲ್ಲಿ ಅನ್ನ ಕೊಟ್ಟವಳು ‘ಕನ್ನಡ ತಾಯಿ’..! ಅವರಿಬ್ಬರ ಬಗ್ಗೆಯೂ ನನಗೆ ಅಪಾರ ಪ್ರೀತಿ, ಅಭಿಮಾನ, ಗೌರವವಿದೆ. ಹಾಗಾಗಿಯೇ ಕನ್ನಡದ ವಿಚಾರದಲ್ಲಿ ಯಾರಾದರೂ ತಪ್ಪಾಗಿ ಮಾತಾಡಿದರೆ ನಾನು ದ್ವನಿ ಎತ್ತುತ್ತೇನೆ. ಹಾಗೆಯೇ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೆರಿಸಿ ಅಂತಲೂ ಧ್ವನಿಯಾಗಿದ್ದೇನೆ. ಹೀಗೆ ಮಾಡಿದ ಮಾತ್ರಕ್ಕೆ ದುಡ್ಡು ಮಾಡಲು ಹೇಗೆ ಸಾಧ್ಯ..? ಅಷ್ಟಕ್ಕೂ ಕನ್ನಡದ ಹೆಸರಲ್ಲಿ ದುಡ್ಡು ಮಾಡೋದು ಅಂದ್ರೆ ಏನು..? ಕೆಲವರು ಕನ್ನಡದ ಹೆಸರಲ್ಲಿ ರೋಲ್‌ಕಾಲ್ ಸಹ ಮಾಡ್ತಾರೆ ಅಂತಾನೂ ಕೇಳಿದೀನಿ. ಹಾಗೆ ಮಾಮೂಲಿ ಕೊಡೋರಾದ್ರೂ ಯಾವ ಕಾರಣಕ್ಕೆ ಕೊಡ್ತಾರೆ..? ಅದೇ ಅರ್ಥವಾಗದ ಪ್ರಶ್ನೆ.. ಇದನ್ನು ಮೀರಿ ಯಾರಾದ್ರೂ ಕನ್ನಡವನ್ನು ಬಳಸಿ ದಂಧೆ ಮಾಡ್ತಿರೋದು ಗೊತ್ತಾದ್ರೆ ಯಾಕೆ ಅಂತವರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡಬಾರದು.‌.?


ಸಾಕಷ್ಟು ಜನ ನನಗೆ ಕನ್ನಡದ ಪರವಾಗಿ ಮಾತಾಡ್ತೀನಿ ಅನ್ನೋ ಕಾರಣಕ್ಕೇ ಕೆಟ್ಟಾಕೊಳಕಾ ಬೈದಿದ್ದಾರೆ. ನಿಂದಿಸಿದ್ದಾರೆ. ಪಬ್ಲಿಸಿಟಿ ಗಿಮಿಕ್ ಅಂದಿದ್ದಾರೆ. ನನಗೆ ಇಂತಹ ಮಾತುಗಳನ್ನು ಕೇಳಿದಾಗ ಆರಂಭದಲ್ಲಿಬತುಂಬಾ ನೋವಾಗ್ತಿತ್ತು. ಯಾವಾಗ ನಿಂದಿಸೋ ಭರದಲ್ಲಿ ನನ್ನ ಕುಟುಂಬವನ್ನು ನಿಂದಿಸೋಕೆ‌ ಶುರು ಮಾಡಿದ್ರೋ, ನಾನು ತುಂಬಾ ಕುಸಿದಿದ್ದೆ. ಎಲ್ಲರ ಹಾಗೆ ನಾನೂ ಸುಮ್ಮನಿದ್ರೆ ನನ್ನನ್ನು ಯಾರೂ ಪ್ರಶ್ನೆ ಮಾಡಲ್ಲ ಅಂತ ಅಂದುಕೊಂಡಿದ್ದೆ. ನನ್ನ ಪತ್ನಿ ‘ ನಿನ್ನಿಂದಾಗಿ ನಾವುಗಳೂ ಬೈಸ್ಕೋಬೇಕು’ ಅಂದಾಗ ನಿಜ ಅನ್ನಿಸ್ತಿತ್ತು. ಆದ್ರೆ ಕೂತು ತುಂಬಾ ಹೊತ್ತು ಯೋಚನೆ ಮಾಡಿದಾಗ ಅನ್ನಿಸ್ತು… ಯಾರು ಇವರೆಲ್ಲಾ.? ನನ್ನ ಬಗ್ಗೆ ಕೆಟ್ಟದಾಗಿ ಮಾತಾಡೋರ ಐಡೆಂಟಿಟಿ ಏನು.? ಕೆಲವು ಫೇಕ್ ಪ್ರೊಫೈಲ್‌ಗಳು, ಕೆಲವು ವೈಯಕ್ತಿಕ, ಮತ್ತೆ ಕೆಲವು ರಾಜಕೀಯ ಪ್ರೇರಿತ..! ಇವರೆಲ್ಲಾ ಒಂದು ದಿನವೂ ಅವರ ಮುಖ ತೋರಿಸಿ ಯಾವ ವಿಚಾರದಲ್ಲೂ ಧ್ವನಿ ಎತ್ತಲು ದೈರ್ಯವಿಲ್ಲದ ಕೀಬೊರ್ಡ್ ವಾರಿಯರ್‌ಗಳು..! ಕೆಲವರ ಪ್ರಕಾರ ನಾನು ಒಳ್ಳೆ ಬಟ್ಟೆ ಹಾಕಬಾರದು, ಕೂಲಿಂಗ್ ಗ್ಲಾಸ್ ಹಾಕಬಾರ್ದು, ಕಾರಲ್ಲಿ ಓಡಾಡಬಾರದು..! ಕನ್ನಡದ ಬಗ್ಗೆ ಮಾತಾಡ್ತೀಯ, ಇದನ್ನೆಲ್ಲಾ ಮಾಡ್ತೀಯ ಅಂದ್ರೆ ಅದ್ಯಾವ ಲಾಜಿಕ್ ಅಂತ ನಂಗೆ ಅರ್ಥಾನೇ ಆಗಲ್ಲ..!  ಇವರಿಗೆಲ್ಲಾ ತಲೆಕೆಡಿಸಿಕೊಂಡು ನಾನು ಕುಗ್ಗಬೇಕಾ ಅನ್ನಿಸಿ ನನ್ನ ಕೆಲಸ ಮುಂದುವರೆಸಿದೆ. ಫೇಸ್ ಬುಕ್ಕಿಗೆ ಸೀಮಿತವಾಗದೇ ನೂರಾರು ಕಾಲೇಜುಗಳಿಗೆ ಭೇಟಿಕೊಟ್ಟು ಯುವಕ ಯುವತಿಯರಲ್ಲಿ ಕನ್ನಡ ಭಾಷೆಯ ಬಗ್ಗೆ, ಕರ್ನಾಟಕದ ಶ್ರೀಮಂತಿಕೆಯ ಬಗ್ಗೆ ಮಾತಾಡೋಕೆ ಶುರುಮಾಡ್ದೆ. ತಳಮಟ್ಟದಲ್ಲಿ ಕನ್ನಡ ಸೇವೆ ಆರಂಭಿಸಿದೆ. ನನಗದು ಖುಷಿ ಕೊಡ್ತು.ಬಿಡುವಿದ್ದಾಗ ಅನಾಥಾಶ್ರಮಕ್ಕೆ, ವೃದ್ದಾಶ್ರಮಕ್ಕೆ ಭೇಟಿ ಕೊಟ್ಟು ಕೈಲಾದ ಸಹಾಯ ಮಾಡಿ ಅವರ ಜೊತೆ ಕಾಲಕಳೆದು ಬರ್ತೀನಿ. ಅದಕ್ಕೆಲ್ಲ ದುಡ್ಡು ಎಲ್ಲಿಂದ ಬರುತ್ತೆ ಅಂತ ಕೇಳೋರೂ ಇದ್ದಾರೆ.. `ಸ್ವಾಮಿ..ನಾನು ಕಷ್ಟಪಟ್ಟು ದುಡೀತೀನಿ. ಬರುವ ದುಡ್ಡಲ್ಲಿ ಸ್ವಲ್ಪ ಹಣ ಅಂತವರಿಗೆ ಮೀಸಲಿಟ್ಟಿದ್ದೇನೆ’

 

ನಾನು ಯಾವ ಕಾರ್ಯಕ್ರಮಕ್ಕೆ ಹೋದ್ರೂ ಒಂದೇಒಂದು ರೂಪಾಯಿ ಪಡೆಯೋದಿಲ್ಲ. ಹಾಕುವ ಶಾಲು, ಕೊಡುವ ಹಣ್ಣು ಸಹ ಮನೆಗೆ ತರಲ್ಲ. ರಸ್ತೆಯಲ್ಲಿ ಸಿಗೋ ಭಿಕ್ಷುಕರಿಗೋ, ವೃದ್ಧರಿಗೋ ಕೊಟ್ಟು ಬರ್ತೀನಿ. ಕಷ್ಟ ಅಂತ ಬಂದವರಿಗೆ ಕೈಲಾದಷ್ಟು ಸಹಾಯ ಮಾಡ್ತೀನಿ. ನನಗೂ ಕಷ್ಟವಿದೆ, ಬಾಡಿಗೆ ಮನೆಯಲ್ಲೇ ಇವತ್ತಿಗೂ ವಾಸವಿದ್ದೇನೆ. ಹನ್ನೊಂದು ವರ್ಷ ರಾತ್ರಿ ಹಗಲು ಮಾಧ್ಯಮದಲ್ಲಿ ಒಂದಷ್ಟು ದುಡಿದಿದ್ದೇನೆ. ಈಗಲೂ ಕೆಲಸ ಮಾಡದಿದ್ದರೆ ಬದುಕು ಸಾಗಿಸೋದು ಕಷ್ಟವೇ..! ಸಿಕ್ಕಸಿಕ್ಕ ಸಿನಿಮಾ ಎಲ್ಲಾ ಮಾಡಿದ್ರೆ ಒಂದಷ್ಟು ದುಡ್ಡು ಮಾಡಬಹುದಿತ್ತೇನೋ, ನನಗೆ ಮನಸ್ಸು ಒಪ್ಪಲ್ಲ. ಹಾಗಾಗಿ ಗೆಳೆಯರೇ ಅಲ್ಪಸ್ವಲ್ಪ ದುಡ್ಡು ಹಾಕಿ ಸಿನಿಮಾ ಮಾಡ್ತಿದೀವಿ. ಸಾಕು ನನಗೆ..ನಾನು ಅಲ್ಪತೃಪ್ತಿ ಸಂತೋಷಿ…! ಕೋಟಿಕೋಟಿ ಮಾಡುವ ಆಸೆ ಇಲ್ಲ, ಮಾಡುವುದಾದರೂ ಕೆಟ್ಟ ದಾರಿ ಹಿಡಿಯಲ್ಲ. ತೋಳಲ್ಲಿ, ತಲೆಯಲ್ಲಿ ಬಲವಿರುವ ತನಕ ದುಡಿದೇ ಬದುಕುತ್ತೇನೆ. ಬಿಗ್‌ಬಾಸ್‌ನಿಂದ ಬಂದ ಹಣದಲ್ಲಿ ಬಹುಪಾಲು ಕನ್ನಡ ಶಾಲೆಗೆ, ಕೆಲವರ ಅಡ್ಮಿಶನ್‌ಗೆ, ಮತ್ತೆ ಕೆಲವರ ವೈದ್ಯಕೀಯ ಖರ್ಚಿಗೆ ಕೊಟ್ಟು ಉಳಿದಿದ್ದರಲ್ಲಿ ನನ್ನ ಕುಟುಂಬವನ್ನು ಸಂತೋಷವಾಗಿಟ್ಟಿದ್ದೇನೆ. ಈಗಲೂ ಸಂಬಳಕ್ಕೆ ದುಡೀತೀನಿ. ಬಿಡುವಿನ ವೇಳೆಯಲ್ಲಿ ದೊಡ್ಡದೊಡ್ಡ ಯೋಜನೆಗಳ ಬಗ್ಗೆ ಮೀಟಿಂಗ್, ಭೇಟಿ ಅದು ಇದು ಇದ್ದೇ ಇರುತ್ತೆ. ಯಾವ ಪುಕ್ಷಟ್ಟೆ ದುಡ್ಡು ನಂಗೆ ಬೇಕಾಗಿಲ್ಲ. ನನಗದರ ಆಸೆಯೂ ಇಲ್ಲ..! ನನಗೆ ನನ್ನ ಬಗ್ಗೆ ಹೆಮ್ಮೆ ಇದೆ, ಆತ್ಮತೃಪ್ತಿ ಇದೆ.

‘ಎಲ್ಲರೂ ಹೋಗೋ ಪ್ರೊಗ್ರಾಮಿಗೆಲ್ಲಾ ಸಾವಿರಾರು ರೂಪಾಯಿ ತಗೋತಾರೆ. ನೀನು ಮಾತ್ರ ನಿನ್ನ ಕಾರಿಗೆ ನೀನೇ ಪೆಟ್ರೋಲ್ ಹಾಕಿಸ್ಕೊಂಡು ಫ್ರೀಯಾಗಿ ಹೋಗಿಬರ್ತಿಯ’ ಅಂತ ನನ್ನ ಹೆಂಡತಿ ನೂರು ಸಲ ಹೇಳಿದ್ರು ನನಗದು ಕಿವಿಗೆ ತಾಕಲ್ಲ..! ನಾನು ಹೋಗಿ ಮಾತಾಡೋದು ಕನ್ನಡದ ಬಗ್ಗೆ, ಬದುಕಿನ ಬಗ್ಗೆ. ಅದಕ್ಕೆ ದುಡ್ಡು ಪಡೆಯೋಕೆ ಮನಸ್ಸು ಒಪ್ಪಲ್ಲ..!
ಸಾಕಷ್ಟು ಜನ ತುಂಬಾ ಅಸಹ್ಯವಾಗಿ ಕಮೆಂಟ್ ಹಾಕ್ತಾರೆ. ನನಗೀಗ ಅದಕ್ಕೆಲ್ಲಾ ಬೇಜಾರಿಲ್ಲ. ಒಂದೆರೆಡು ಸಲ ನೋಡ್ತೀನಿ. ಎಲ್ಲದಕ್ಕೂ ನೆಗೆಟಿವ್ ಕಮೆಂಟ್ ಹಾಕ್ತಿದ್ರೆ ಬ್ಲಾಕ್ ಮಾಡಿಬಿಡ್ತೀನಿ. ನನ್ನ ಉತ್ಸಾಹ ಕುಗ್ಗಬಾರದು ಎಂಬ ಕಾರಣಕ್ಕೆ…


ನಾನ್ಯಾವತ್ತೂ ‘ಕನ್ನಡವನ್ನೇ ಮಾತಾಡಬೇಕು’ ಅಂತ ಹೇಳಲ್ಲ.. ಕನ್ನಡವನ್ನೂ ಮಾತಾಡಬೇಕು’ ಅಂತೀನಿ. ಕನ್ನಡವನ್ನು ಕಡೆಗಣಿಸಿದಾಗ ಮಾತ್ರ ಪ್ರಶ್ನೆ ಮಾಡ್ತೀವೇ ಹೊರತು, ಸುಮ್ಮನೆ ಕಿರಿಕ್ ಮಾಡಲ್ಲ..! ಕನ್ನಡ ನನ್ನಮ್ಮ ಅಂತಾದ್ರೆ ಅವಳ ಹೆಸರಲ್ಲಿ ದುಡ್ಡು ಮಾಡೋ ದರಿದ್ರ ನನಗ್ಯಾವತ್ತೂ ಬರಲಾರದು. ಯಾರಾದ್ರೂ ಕೀರ್ತಿಗೆ ಕನ್ನಡದ ಹೆಸರಲ್ಲಿ 50 ಪೈಸೆ ಕೊಟ್ಟಿದ್ರೆ ತಿಳಿಸಿ… ನಿಮ್ಮ ಮನೆಗೆ ಜೀತಕ್ಕೆ ಬರ್ತೀನಿ.. ಸಾಯೋ ತನಕ…! ನೂರು ಜನರ ಜೊತೆ ನನ್ನನ್ನು ಸೇರಿಸಬೇಡಿ. ನಾನು ಬೇರೇನೆ. ನಾನು ಸಾಮಾನ್ಯರಲ್ಲಿ ಸಾಮಾನ್ಯ… ನಿಮ್ಮ ಆಶೀರ್ವಾದ, ಪ್ರೀತಿ ಸದಾ ಇರಲಿ ಅಷ್ಟೆ…

-ನಿಮ್ಮ ಕಿರಿಕ್ ಕೀರ್ತಿ

Show More

Related Articles

4 thoughts on “ಕಿರಿಕ್ ಕೀರ್ತಿ ಕನ್ನಡದ ಹೆಸರಲ್ಲಿ ದುಡ್ಡು ಮಾಡ್ತಿದ್ದಾನಾ..!?”

  1. ನಾನು ಕಿರಿಕ್ ಕೀರ್ತಿ ಬಲ್ಲೆ. ಭಾಷೆ ಹೆಸರು ಹೇಳಿಕೊಂಡು ಹಣ ಮಾಡಿಕೊಳ್ಳುವ ವ್ಯೆಕ್ತಿತ್ವ ಅಲ್ಲ. ಮಾಜಿ ಬಂಡಾಯ ಸಾಹಿತಿಗಳು ಕನ್ನಡದ ಹೆಸರಲ್ಲಿ ಸರಕಾರದ ವಿವಿಧ ಅಧಿಕಾರಗಳನ್ನು ಅನುಭವಿಸಿ ವೆಲ್ ಸೆಟ್ಲ್ ಜೀವನ ಮಾಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಂತಹ ಗೌರವ ಹಣ ಪಡೆದುಕೊಂಡು ಕನ್ನಡಿಗರ ಕಣ್ಣಿಗೆ ನೇರಾನೇರ ಖಾರದ ಪುಡಿ ಉಪ್ಪು ಎಸೆಯುತ್ತಿದ್ದಾರೆ.. ಇವತ್ತಿಗೂ ಕೋಟ್ಯಧೀಶರಾಗಿ ಮೆರೆಯುತ್ತಿದ್ದಾರೆ. ಇನ್ನೂ ಅವರಿಗೆ ಧನದಾಹ ಅಧಿಕಾರ ದಾಹ ವೇದಿಕೆದಾಹ ತೀರಿಲ್ಲ. ಸರಕಾರದ ಇಂತಹ ಯಾವುದೇ ಹುದ್ದೆಗಾಗಿ ಕೀರ್ತಿ ಆಶೆಪಟ್ಟಿಲ್ಲ. ಅವರನ್ನು ಒಬ್ಬ ಕಲಾವಿದರಾಗಿ ನೋಡಬೇಕೆ ಹೊರತು ಹೋರಾಟಗಾರನನ್ನಾಗಿ ಅಲ್ಲ. – ಜೆ.ಎಮ್.ರಾಜಶೇಖರ ಸಾಹಿತಿ ಮಾಹಿತಿ ಹಕ್ಕು ತಜ್ಞ. 9448962082

    1. ಕೀರ್ತಿ ಯವರೇ ನಿಮ್ಮನ್ನು* ಕಿರಿಕ್ ಕೀರ್ತಿ* ಅಂಥ ಕರೇಯೋಕೆ ತುಂಬಾ ನೋವು ಅಗುತ್ತೆ… ದಯವಿಟ್ಟು ನಿಮ್ಮ ಹೆಸರಲ್ಲಿರೋ ಕಿರಿಕ್ ತೆಗೆದುಹಾಕಿ..

  2. ಕನ್ನಡ ಉಳಿಸಿ,ಕನ್ನಡ ಬಳಸಿ ದಯವಿಟ್ಟು ಈ ತರದ ಆರೋಪ ಮಾಡಬೇಡಿ. ಕೀರ್ತಿ ಅಣ್ಣ ಆ ತರದ ವ್ಯಕ್ತಿ ಅಲ್ಲ. ಜೈಹಿಂದ್

Leave a Reply

Your email address will not be published. Required fields are marked *

Close