ಸಿನಿ ಸುದ್ದಿ

ಪೈರಸಿ ಮಾಡೋ ನನ್ ಮಕ್ಳು ಕೈಗೆ ಸಿಕ್ಕಿದ್ರೆ…

-ಕಿರಿಕ್ ಕೀರ್ತಿ

‘ನನ್ ಮಕ್ಳಿಗೆ ನಮ್ ಕಷ್ಟ ಗೊತ್ತಾಗಲ್ಲ ಸರ್, ಕೈಗೆ ಸಿಕ್ಕುಬಿಟ್ರೆ ಚಚ್ಚಾಕ್ ಬಿಡಣ ಅನ್ಸುತ್ತೆ’ ಅಂತ ಕೋಪ ಮಾಡ್ಕೊಂಡವರು ಹಿರಿಯ ನಿರ್ಮಾಪಕರೊಬ್ಬರು. ಈ ಪೈರಸಿ ಬಗ್ಗೆ ಏನ್ ಹೇಳ್ತೀರಿ ಅಂದಿದ್ದಕ್ಕೆ ಅದು ಅವರ ಉತ್ತರ. ಹೌದು, ಅದು ಸಿಕ್ಕಾಪಟ್ಟೆ ಸಂಕಟ ಆಗೋ ವಿಚಾರ. ವರ್ಷಗಟ್ಟಲೇ ಕಷ್ಟಪಟ್ಟು ಶೂಟಿಂಗ್ ಮಾಡಿ, ಬಡ್ಡಿಗೆ ದುಡ್ಡು ತಂದು, ಒದ್ದಾಡ್ಕೊಂಡು ಸಿನಿಮಾ ಮಾಡಿದ್ರೆ, ರಿಲೀಸ್ ಆದ ಮಾರನೇ ದಿನ ಅದು ಯೂಟ್ಯೂಬಲ್ಲೋ, ಫೇಸ್‌ಬುಕ್ಕಲ್ಲೋ ಬಂದ್ರೆ ಪಾಪ ಆ ಚಿತ್ರತಂಡಕ್ಕೆ ಅದೆಷ್ಟು ಹೊಟ್ಟೆ ಉರೀಬೋದು..?

”ಹೊಟ್ಟೆ ಉರಿಯುತ್ತೆ ಸಾರ್, ಇಷ್ಟು ಹೊಟ್ಟೆ ಉರುಸ್ಬಾರ್ದು. ದಿನಾ ಹತ್ತಾರು ಜನ ಸೀನ್ಸ್ ಅಪ್‌ಲೋಡ್ ಮಾಡ್ತಾನೇ ಇರ್ತಾರೆ. ಡಿಲೀಟ್ ಮಾಡ್ಸಿ ಮಾಡ್ಸಿ ಸಾಕಾಗಿದೆ. ಪೈರಸಿ ನಮ್ ಇಂಡಸ್ಟ್ರಿನ ಸಾಯಿಸ್ತಿದೆ.”

-ಧೃವ ಸರ್ಜಾ
ನಾಯಕ

ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಈ ಪೈರಸಿ ಅನ್ನೋ ಸಮಸ್ಯೆ ಇದೆ. ಆದ್ರೆ ಕನ್ನಡದಲ್ಲಿ ಇದರ ಹಾವಳಿ ಇತ್ತೀಚೆಗೆ ಮಿತಿಮೀರಿದೆ. ಕೆಲವು ಸಿನಿಮಾಗಳ ಎಚ್.ಡಿ ಪ್ರಿಂಟ್ ರಿಲೀಸ್ ದಿನಾನೇ ಸಿಕ್ಕಿದ್ದೂ ಇದೆ‌. ಇದು ಹೇಗೆ ಸಾಧ್ಯ ಆಗ್ತಿದೆ ಅನ್ನೋದೇ ಅರ್ಥ ಆಗಲ್ಲ..! ಕೆಲವರು ಲೈಕ್, ವ್ಯೂಸ್ ಚಟಕ್ಕೆ ಬಿದ್ದು ಸಿನಿಮಾನ ಮೊಬೈಲಲ್ಲಿ ಶೂಟ್ ಮಾಡ್ಕೊಂಡು ತಂದು ತಮ್ಮ ಪೇಜಲ್ಲಿ ಹಾಕ್ಕೋತಾರೆ. ಅಂತವರೇ ಈ ನಿರ್ಮಾಪಕ, ಹಂಚಿಕೆದಾರರಿಗೆ ತಲೆನೋವಾಗಿರೋದು..!
ಮೊನ್ನೆಮೊನ್ನೆ ರಿಲೀಸ್ ಆದ ‘ಭರ್ಜರಿ’ ಸಿನಿಮಾನ ಒಬ್ಬ ಶೂರ ಹುಬ್ಬಳ್ಳಿ ಚಿತ್ರಮಂದಿರದಲ್ಲಿ ಕೂತು ಫೇಸ್‌ಬುಕ್ ಲೈವೇ ಮಾಡ್ಬಿಟ್ಟ..! ಯಾಕಪ್ಪಾ ಹಿಂಗ್ ಮಾಡ್ಬುಟ್ಟೆ ಅಂದ್ರೆ ‘ನಾನು ಧೃವಣ್ಣನ್ ಫ್ಯಾನು, ಅದುಕ್ಕೇ ಮಾಡ್ಬುಟ್ಟೆ’ ಅಂತಾನೆ..! ಫ್ಯಾನ್ ಆದ್ರೆ ಅವ್ರ್ ಹೆಸ್ರಲ್ಲಿ ಅನ್ನದಾನ ಮಾಡ್ರೋ, ಅದನ್ನ ಬಿಟ್ಟು ಆ ಸಿನಿಮಾ ಮಾಡಿರೋರ ಅನ್ನ ಕಿತ್ಕೊಂಡ್ರೆ ಹೆಂಗ್ರಪ್ಪಾ..? ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅನ್ನೋ ಹಾಗೆ ಕಷ್ಟಪಟ್ಟು ಮಾಡಿರೋ ಸಿನಿಮಾನ ಪೈರಸಿ ಮಾಡಿ ಕೆಲವೇ ಗಂಟೆಯಲ್ಲಿ ಕೊಲೆ ಮಾಡೋದು ಯಾವ ಅಭಿಮಾನಾನೋ ಆಂಜನೇಯಂಗೆ ಗೊತ್ತು..!

ಪೈರಸಿಯಲ್ಲಿ ನಾನಾ ವಿಧ. ಅದೇನೋ ಥಿಯೇಟರ್ ಪ್ರಿಂಟ್ ಅಂತೆ, ಲ್ಯಾಬ್ ಪ್ರಿಂಟ್ ಅಂತೆ, ಎಚ್ಡಿ ಪ್ರಿಂಟು, ಓಕೆಓಕೆ ಕಾಪಿ, ಅದರ ಜೊತೆಗೆ ಸೆನ್ಸಾರ್ ಪ್ರಿಂಟೂ ಇದ್ಯಂತೆ..! ಅದೆಲ್ಲಿಂದ ಸಿಗುತ್ತೋ ನಮ್ ದೇವ್ರಾಣೆ ಅರ್ಥವಾಗಲ್ಲ..!
ಸಿನಿಮಾ… ಅದು ಸಾವಿರಾರು ಜನರ ಅನ್ನದ ಮಾರ್ಗ. ಒಬ್ಬ ಮೇಕಪ್ ಮ್ಯಾನ್, ಲೈಟ್ ಮ್ಯಾನ್‌ನಿಂದ ಹಿಡಿದು ನಿರ್ಮಾಪಕನ ತನಕ ಎಲ್ಲರ ಶ್ರಮ ಅದರಲ್ಲಿರುತ್ತೆ. ಅದಕ್ಕೆ ಪೈರಸಿ ಅನ್ನೋದು ಒಂಥರಾ ಶಾಪ. ಅಷ್ಟು ದಿನದ ಶ್ರಮ ನೀರಲ್ಲಿ ಹೋಮ ಮಾಡಿದ ಹಾಗೆ…

ನೀವು ಮೊಬೈಲಲ್ಲಿರೋ 12 ಮೆಗಾ ಪಿಕ್ಸೆಲ್ ಕ್ಯಾಮರಾದಲ್ಲಿ ಥಿಯೇಟರ್‌ನಲ್ಲಿ ಕೂತು ಶೂಟ್ ಮಾಡೋ ಸಿನಿಮಾನ ಆ ಚಿತ್ರತಂಡದವರು ಅಲೆಕ್ಸಾ, ರೆಡ್ ಎಪಿಕ್ ಅನ್ನೋ ಕೋಟ್ಯಾಂತರ ರೂಪಾಯಿ ಕ್ಯಾಮರಾದಲ್ಲಿ ಎಲ್ಲೆಲ್ಲೋ ಕಷ್ಟಪಟ್ಟು ಕೂತು ಶೂಟಿಂಗ್ ಮಾಡಿರ್ತಾರೆ. ನೀವು ಅದನ್ನ ನೂರಿನ್ನೂರು ರೂಪಾಯಿ ಟಿಕೆಟ್ ತಗೊಂಡು ಸೀಕ್ರೆಟ್ ಕ್ಯಾಮರಾ ಅಪ್ಲಿಕೇಆನ್ ಡೌನ್‌ಲೋಡ್ ಮಾಡ್ಕೊಂಡು ಸೈಲೆಂಟಾಗಿ ರೆಕಾರ್ಡ್ ಮಾಡ್ಕೊಂಡು ಬಂದು ಯೂಟ್ಯೂಬಲ್ಲಿ ಹಾಕಿದ್ರೆ ನಿಮಗೆ ಬರೋದು ಒಂದಷ್ಟು ಲಕ್ಷ ವ್ಯೂಸ್. ಆದ್ರೆ ನಿರ್ಮಾಪಕನಿಗೆ ಆಗೋ ನಷ್ಟ ಕೋಟಿ ಕೋಟಿ ರೂಪಾಯಿ..! ನಿಮಗೆ ವಿಕೃತ ಸಂತೋಷ, ಅವರಿಗೆ ಸಂಕಷ್ಟ..! ಬೇಡ, ಯಾವತ್ತೂ ಆ ಪ್ರಯತ್ನ ಮಾಡಬೇಡಿ. ಅಪ್ಪಿತಪ್ಪಿ ನೀವು ಶೂಟಿಂಗ್ ಮಾಡುವಾಗ ಸಿಕ್ಕಾಕೊಂಡ್ರೆ ಅದಾಗಿ 2-3 ಗಂಟೇಲಿ ಪರಪ್ಪನ ಅಗ್ರಹಾರದಲ್ಲಿರಬೇಕಾಗುತ್ತೆ. ಈಗ ಪ್ರತಿ ನಿರ್ಮಾಪಕನೂ, ಪ್ರತಿ ಚಿತ್ರಮಂದಿರದಲ್ಲಿ ಪೈರಸಿ ತಡೆಯೋಕೆ ಅಂತಾನೇ ತಂಡ ಇಟ್ಟಿದ್ದಾರೆ. ತಗ್ಲಾಕ್ಕೊಂಡ್ರೆ ಎಷ್ಟ್ ಗೋಗರೆದರೂ ಬಿಡಲ್ಲ, ನೆನಪಿರಲಿ…

Show More

Related Articles

Leave a Reply

Your email address will not be published. Required fields are marked *

Close