ಏನ್ ಸುದ್ದಿ?

ಚೆನ್ನೈನಲ್ಲಿ ತಮಿಳಿದೆ…ಹೈದರಾಬಾದಲ್ಲಿ ತೆಲುಗಿದೆ… ಬೆಂಗಳೂರಲ್ಲಿ ಕನ್ನಡ ಯಾಕಿಲ್ಲ..?

ಸಾಕಷ್ಟು ಸಲ‌ ನನ್ನೊಳಗೇ ಕಾಡೋ ಪ್ರಶ್ನೆ ಅದು… ಕರ್ನಾಟಕದಲ್ಲಿ ಮಾತ್ರ ಯಾಕೆ ಹೀಗಾಗುತ್ತೆ..? ಬೇರೆ ರಾಜ್ಯಗಳಲ್ಲೆಲ್ಲೂ ಅವರ ಭಾಷೆಗೆ ಧಕ್ಕೆಯಾಗದ ಹಾಗೆ ಎಲ್ಲ ಕಡೆಗಳಲ್ಲೂ ಅವರ ಭಾಷೆಗೆ ಸ್ಥಾನಮಾನ ಸಿಗುತ್ತೆ. ಆದ್ರೆ ಕರ್ನಾಟಕದಲ್ಲಿ, ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಮಾತ್ರ ಕನ್ನಡವನ್ನು ಕಡೆಗಣಿಸೋದ್ಯಾಕೆ..? ಇದು ಎಷ್ಟೋ ಸಲ ಉತ್ತರ ಸಿಗದ ಪ್ರಶ್ನೆ.

ಮೊನ್ನೆ ನಾನು ಕಾರ್ಯಕ್ರಮವೊಂದಕ್ಕೆ ಕಲ್ಬುರ್ಗಿಗೆ ಹೊರಟಿದ್ದೆ. ಹೈದರಾಬಾದ್‌ವರೆಗೂ ವಿಮಾನದಲ್ಲಿ ತೆರಳಿ ಅಲ್ಲಿಂದ ರಸ್ತೆ ಮಾರ್ಗವಾಗಿ ಕಲ್ಬುರ್ಗಿಗೆ ಹೋದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೂತು ವಿಮಾನ ಬರುವ ಮತ್ತು ಹೋಗುವ ಮಾಹಿತಿ ನೀಡುವ ಬೋರ್ಡ್ ನೋಡ್ತಾ ಇದ್ದೆ. ಬರೀ ಇಂಗ್ಲೀಷಲ್ಲೇ ಬರ್ತಾ ಇತ್ತು. ವಿಶ್ವದ ಮೂಲೆಮೂಲೆಗೆ ಹೋಗುವ ಜನರಿರ್ತಾರೆ, ಅದರಲ್ಲೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೇರೆ, ಆ ಕಾರಣಕ್ಕೆ ಇಂಗ್ಲೀಷಲ್ಲಿ ಮಾತ್ರ ಮಾಹಿತಿ ನೀಡ್ತಿದ್ದಾರೆ ಅನ್ಕೊಂಡೆ. ವಿಮಾನ ಹತ್ತಿ 50 ನಿಮಿಷದಲ್ಲಿ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ವಿ. ಅಲ್ಲಿ ಹೊರಹೋಗುವಾಗ ಮತ್ತೆ ವಿಮಾನದ ಮಾಹಿತಿ ನೀಡುವ ಬೋರ್ಡ್ ನೋಡ್ದೆ. ಏನಶ್ಚರ್ಯ.? ಒಮ್ಮೆ ಇಂಗ್ಲೀಷಲ್ಲಿ ಮತ್ತೊಮ್ಮೆ ತೆಲುಗುವಿನಲ್ಲಿ ಮಾಹಿತಿ ಬರ್ತಿತ್ತು..! ಅರೆ, ಇದೆಂಥಾ ನ್ಯಾಯ..? ಚೆನ್ನೈನಲ್ಲೂ ತಮಿಳಿನಲ್ಲಿ ಮಾಹಿತಿ ನೀಡ್ತಾರೆ ಅನ್ನೋದನ್ನು ಕೇಳಿದ್ದೇನೆ. ಆದ್ರೆ ಈಗ ಹೈದರಾಬಾದ್‌ನಲ್ಲಿ ಇದನ್ನು ಕಣ್ಣಾರೆ ನೋಡಿದ್ದೆ…! ಇಲ್ಲಿ ಕನ್ನಡ ಮಾತಾಡಿದ್ರೆ ಸರಿಯಾಗಿ ರೆಸ್ಪಾಂಡ್ ಸಹ ಮಾಡಲ್ಲ. ಆದ್ರೆ ಅಲ್ಲಿ ಮಾಹಿತಿಯನ್ನೇ ತೆಲುಗು ಭಾಷೆಯಲ್ಲಿ ನೀಡ್ತಾರೆ ಅಂದ್ರೆ ಇಲ್ಲಿ, ನಮ್ಮ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತೆ..! ಇದು ಸಹಿಸಲಸಾಧ್ಯ..!

Bengaluru Airport
Hyderabad Airport

ಎಂ.ಪಿ, ಎಮ್ಮೆಲ್ಲೆ, ಸಚಿವರು ಸೇರಿದಂತೆ ಎಲ್ಲ ರಾಜಕಾರಣಿಗಳೂ ಇದೇ ವಿಮಾನ ನಿಲ್ದಾಣದ ಮೂಲಕ ಬೇರೆಬೇರೆ ಕಡೆಗಳಿಗೆ ಪ್ರಯಾಣ ಬೆಳೆಸ್ತಾರೆ. ಆದ್ರೆ ಕನ್ನಡವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಡೆಗಣಿಸ್ತಿದ್ದಾರೆ ಅನ್ನೋದು ಅರಿವಿಗೆ ಬರಲೇ ಇಲ್ವಾ..? ಬಂದರೂ ಅದನ್ಯಾರೂ ಪ್ರಶ್ನೆ ಮಾಡಲಿಲ್ವಾ.? ಈ ಸಂಬಂಧ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರಿಗೆ ನನು ಪ್ರಶ್ನೆ ಮಾಡಿದಾಗ, ‘We dont know about that sir’ ಅಂತ ಅಲ್ಲಿಂದ ಹೊರಟು ಹೋದ್ರು..! ಒಂದೊಂದು ಭಾಷೆಗೆ ಒಂದೊಂದು ನ್ಯಾಯ ಯಾಕೆ..?ಕರ್ನಾಟಕದ ಆಡಳಿತ ಭಾಷೆಗಳಾದ ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಮಾಹಿತಿ ನೀಡಬೇಕಾಗಿದ್ದು ವಿಮಾನ ನಿಲ್ದಾಣದ ಕರ್ತವ್ಯ ಅಲ್ವಾ..? ಅಲ್ಲಿ ತೆಲುಗು,ತಮಿಳು ಇರಬಹುದು ಅಂತಾದ್ರೆ ಕೆಂಪೇಗೌಡರ ಹೆಸರಿರೋ ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಮಾಹಿತಿ ಯಾಕೆ ನೀಡಬಾರದು..? ಇದನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಯಾಕೆ ಪ್ರಶ್ನೆ ಮಾಡಬಾರದು.? ಒಂದು ಪತ್ರ ಯಾಕೆ ಬರೆಯಬಾರದು..? ದಯಮಾಡಿ ಸಂಬಂಧಪಟ್ಟವರಿಗೆ ಇದನ್ನು ತಲುಪಿಸಲು ಸಹಕರಿಸಿ… ಜೈ ಭುವನೇಶ್ವರಿ…

Show More

Related Articles

Leave a Reply

Your email address will not be published. Required fields are marked *

Close