ಏನ್ ಸುದ್ದಿ?

ಮಗನ ಚಿಕಿತ್ಸೆಗೆ ಹಣವಿಲ್ಲದೇ ಮಗನ ಜೊತೆಗೇ ಆತ್ಮಹತ್ಯೆಗೆ ಶರಣಾದ ತಾಯಿ..! -ಇದು ನೋವಿನ ಕಥೆ…

ಇದು ಮನಸ್ಸಿಗೆ ತುಂಬಾ ಬೇಸರಪಡಿಸೋ ಸುದ್ದಿ… ದೇಶದ ಪ್ರಗತಿಯ ವಿಚಾರದಲ್ಲಿ ನಾವು ಎಷ್ಟೆಷ್ಟೋ ಮಾತಾಡಿದ್ರೂ ಭಾರತದ ಕೆಲವು ಭಾಗಗಳಲ್ಲಿ ಜನರ ಪರಿಸ್ಥಿತಿ ಹೇಗಿದೆ ಅಂತ ಬಿಡಿಸಿ ಹೇಳುವ ಸುದ್ದಿ..! ತನ್ನ ಮಗುವಿಗೆ ಡೆಂಗ್ಯೂ ಖಾಯಿಲಿ ಬಂದಿದೆ ಅಂತ ಗೊತ್ತಾಗಿ, ಆ ಮಗುವಿನ ಚಿಕಿತ್ಸೆಗೆ ಹಣವಿಲ್ಲ ಎಂಬ ಕಾರಣಕ್ಕೆ ಮಗುವಿನ ಜೊತೆಗೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಕಥೆ ಇದು…


ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಬೆಲುಕುರುಚಿ ಎಂಬಲ್ಲಿ ನಡೆದಿರುವ ಘಟನೆ ಇದು. ಪೆರಿಯಸ್ವಾಮಿ ಹಾಗೂ ಅನ್ಬುಕೋಡಿ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗಳಿಗೆ ಒಂಭತ್ತು ವರ್ಷ, ಮಗನಿಗೆ ನಾಲ್ಕು ವರ್ಷ. ಪೆರಿಯಸ್ವಾಮಿ ಊರಲ್ಲಿ ಕ್ಷೌರಿಕ. ತುಂಬಾ ಬಡತನದಲ್ಲಿದ್ದ ಕುಟುಂಬವದು. ಅವತ್ತಿನ ಖರ್ಚಿಗೆ ಅವತ್ತಿನ ಜೀವನ. ಹೀಗಿದ್ದಾಗ ನಾಲ್ಕು ವರ್ಷದ ಮಗನಿಗೆ ಡೆಂಗ್ಯೂ ಬಂದಿದೆ ಅನ್ನೋದು ವೈದ್ಯರನ್ನು ಸಂಪರ್ಕಿಸಿದಾಗ ಗೊತ್ತಾಗಿದೆ.

ಈ ವಿಷಯ ತಿಳಿದು ದಂಪತಿಗಳಿಗೆ ಶಾಕ್ ಆಗಿದೆ. ಅದರಲ್ಲೂ ಯಾವಾಗ ವೈದ್ಯರು ಮಗನ ಚಿಕಿತ್ಸೆಗೆ ಪ್ರತಿದಿನ ನಾಲ್ಕು ಸಾವಿರ ರೂಪಾಯಿಗಳ ಅವಶ್ಯಕತೆ ಇದೆ ಅಂದ್ರೋ, ದಂಪತಿಗಳಿಗೆ ಏನು ಮಾಡಬೇಕು ಅಂತಲೇ ಗೊತ್ತಾಗಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಹಣ ಹೊಂಚಲು ಸಾಧ್ಯವಾಗಲಿಲ್ಲ. ರಾತ್ರಿಯಿಡೀ ಗಂಡ ಹೆಂಡತಿ ನಡುವೆ ಈ ವಿಚಾರಕ್ಕೆ ಮಾತುಕತೆ ನಡೆದಿದೆ. ರಾತ್ರಿ ಮೂರು ಗಂಟೆಯವರೆಗೂ ಯೋಚಿಸಿ ಕಣ್ಣೀರಾಗಿದ್ದಾರೆ. ಮಲಗಿ ಅರ್ಧ ಗಂಟೆಗೆ ಪೆರಿಯಸ್ವಾಮಿಗೆ ಎಚ್ಚರವಾಗಿದೆ. ಎದ್ದು ನೋಡಿದ್ರೆ ಹೆಂಡತಿ ಮತ್ತು ಮಗ ಇಲ್ಲದಿರುವುದು ನೋಡಿ ಗಾಬರಿಯಾಗಿದ್ದಾರೆ. ಹೊರಗೆ ಬಂದು ನೋಡಿದ್ರೆ, ಅವರಿಬ್ಬರು ಮನೆಯ ಎದುರಿನ ಬಾವಿಯಲ್ಲಿ ಶವವಾಗಿದ್ರು. ತಕ್ಷಣ ಪೊಲೀಸರಿಗೆ ಪೆರಿಯಾಸ್ವಾಮಿ ವಿಷಯ ತಿಳಿಸಿದ್ದಾರೆ.

ಇಲ್ಲಿ ತುಂಬಾ ಬೇಸರವಾಗುವ ವಿಚಾರವೆಂದರೆ, ಮಗುವಿನ ಚಿಕಿತ್ಸೆಗೆ ಹಣವಿಲ್ಲ ಎಂಬ ಕಾರಣಕ್ಕೆ ಸಾವಿಗೆ ಶರಣಾಗಿದ್ದು. ಇಂತಹ ಅದೆಷ್ಟೋ ಕುಟುಂಬಗಳು ಈಗಲೂ ಭಾರತದಲ್ಲಿವೆ. ಕನಿಷ್ಟ ವೈದ್ಯಕೀಯ ಸೌಲಭ್ಯಗಳಿಂದಲೂ ಇವರೆಲ್ಲಾ ವಂಚಿತರಾಗ್ತಿರೋದು ಬೇಸರದ ವಿಚಾರ. ತಳಮಟ್ಟದಲ್ಲಿ ಭಾರತೀಯ ಬಡಕುಟುಂಬಗಳನ್ನು ಸಧೃಡಗೊಳಿಸಬೇಕಾದ ಅವಶ್ಯಕತೆ ಇದೆ. ರಾಜಕಾರಣಿಗಳು ವೋಟಿನಾಚೆಗೂ ಬಡವರ ಬಗ್ಗೆ ಯೋಚಿಸಬೇಕಿದೆ…

Show More

Related Articles

Leave a Reply

Your email address will not be published. Required fields are marked *

Close