ಒಳ್ಳೆ ವಿಷ್ಯ

ನನ್ನ ಸಾವಿಗೆ ನಾನೇ ಕಾರಣ…

–ಕಿರಿಕ್ ಕೀರ್ತಿ
ಇದು ವಿಶ್ವದ ಲಕ್ಷಾಂತರ ಜನ ಅವರವರ ಭಾಷೆಯಲ್ಲಿ ಬರೆಯುವ ಜೀವನದ ಕೊನೆಯ ಸಾಲುಗಳು..! ವಿಶ್ವದ ಒಟ್ಟು ಜನಂಖ್ಯೆಯ 1.5% ಜನ ಪ್ರತೀ ವರ್ಷ ಈ ಜಗತ್ತು ಬಿಟ್ಟು ಹೋಗ್ತಾರೆ. ಆದ್ರೆ ಆ ಅವರನ್ನೇ ಹೊಣೆ ಮಾಡಿಕೊಂಡು ಹೋದರೂ ಪ್ರಪಂಚ ಅವರನ್ನು ಯಾವತ್ತೂ ಕ್ಷಮಿಸೋದಿಲ್ಲ. ಅದರಲ್ಲೂ ಭಾರತದಲ್ಲಿ ವಿಶ್ವದ ಆತ್ಮಹತ್ಯೆಗಳಲ್ಲಿ ಶೇಕಡಾ 17-18ರಷ್ಟು ಪ್ರಮಾಣ ಹೊಂದಿರೋದು ಆಘಾತಕಾರಿ ಮತ್ತು ಅಪಾಯಕಾರಿ..!

ಆತ್ಮಹತ್ಯೆ… ಸೋತುಹೋದೆ ಅಂತ ಭಾವಿಸೋ ಅದೆಷ್ಟೋ ಜನರ ಕೊನೆಯ ಅಸ್ತ್ರ. ಇನ್ಯಾವತ್ತೂ ಈ ಜಗತ್ತಿನ ಮುಖ ನೋಡಲ್ಲ ಅಂತ ನಿರ್ಧಾರ ಮಾಡಿ ಬರೆಯುವ ಡೆತ್ ನೋಟ್‌ನ ಕೊನೆಯ ಸಾಲುಗಳೇ ‘ ನನ್ನ ಸಾವಿಗೆ ನಾನೇ ಕಾರಣ’..! ಯಾಕೆ ಸಾಯ್ತಾರೆ? ಹೇಗೆ ಸಾಯ್ತಾರೆ.? ಸಾವಿಗೆ ಕಾರಣವೇನು.? ಆತ್ಮಹತ್ಯೆ ಯೋಚನೆ ಕೈಬಿಟ್ಟರೆ ಮುಂದೆ ಅವರ ಜೀವನ ಹೇಗಿರುತ್ತೆ..? ಒಂದು ಪುಟ್ಟ ಲೇಖನ, ಓದ್ಕೊಂಡು ಹೋಗಿ…

ನಾನು ಸಾಯ್ಬೇಕು ಅಂತ ಯೋಚನೆ ಮಾಡೋದಕ್ಕಿಂತ ಕೆಟ್ಟ ಆಲೋಚನೆ ಈ ಜಗತ್ತಿನಲ್ಲಿ ಮತ್ಯಾವುದೂ ಇಲ್ಲ..! ನಿಮ್ಮದೇ ಜೀವನ, ನಿಮ್ಮದೇ ಜೀವ. ಆದ್ರೆ ಅದನ್ನು ಕೊನೆಯಾಗಿಸುವ ಹಕ್ಕು ನಿಮಗಿಲ್ಲ..! ಈ ಸೃಷ್ಟಿಯಲ್ಲಿ ಕೋಟ್ಯಾಂತರ ಜೀವರಾಶಿಗಳಿವೆ. ಅದ್ರಲ್ಲಿ ಮಾನವ ಜನ್ಮ ಬೇರೆಲ್ಲದ್ದಕ್ಕಿಂತ ಬೇರೆಯೇ ಆಗಿದೆ. ಇವತ್ತು ಮಾನವನಿಂದ ಅಸಾಧ್ಯವಾದುದೇನೂ ಇಲ್ಲ ಅಂತಾಗಿರುವಾಗ ‘ ಈ ಮನುಷ್ಯ ಜನ್ಮವೇ ಬೇಡ’ ಅಂತ ಆತ್ಮಹತ್ಯೆ ಮಾಡಿಕೊಳ್ಳೋದು ಅದೆಷ್ಟು ಸರಿ..? ಅಷ್ಟಕ್ಕೂ ನಿಮ್ಮ ಜೀವನ ನಿಮ್ಮದಾದರೂ ನೀವು ಜಗತ್ತಿಗೆ ಬರೋ ನಿರ್ಧಾರ ನಿಮ್ಮದಲ್ಲ. ಅದು ನಿಮ್ಮ ಹೆತ್ತವರ ನಿರ್ಧಾರ. ಅದಾದ ಮೇಲೆ ನಿಮ್ಮನ್ನು ನಂಬಿರೋ ಹತ್ತಾರು ಸಂಬಂಧಗಳಿರುತ್ತವೆ. ಅದೆಲ್ಲವನ್ನೂ ಮೀರಿ ಸಾವಿನ ನಿರ್ಧಾರ ಮಾಡೋಕೆ ನೀವ್ಯಾರು..? ಹೌದು, ಯಾವುದೋ ಒಂದು ಹಂತದಲ್ಲಿ, ಜೀವನದ ಕಷ್ಟಗಳು, ನೋವುಗಳು, ಬೇಸರ, ನಿಮ್ಮನ್ನು ಬದುಕಿಗೆ ಫುಲ್‌ಸ್ಟಾಪ್ ಹಾಕೋಕೆ ನಿರ್ಧಾರ ಮಾಡುವಂತೆ ಮಾಡಬಹುದು. ಆದ್ರೆ ಅದೊಂದು ಕ್ಷಣ ಆ ನಿರ್ಧಾರವನ್ನು ಎಡಗಾಲಲ್ಲಿ ಒದ್ದು ಮೇಲೆದ್ದರೆ, ‘ಜಗತ್ತೇ ನಿಮ್ಮ ಕೈಯಲಿ’..!


ನೀವು ಪ್ರೀತಿಸಿದ ಹುಡುಗಿ ಅಥವಾ ಹುಡುಗ ಕೈಕೊಟ್ಟಾಗ, ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಸಿಗದೇ ಇದ್ದಾಗ, ಜೀವನದ ಜಂಜಾಟಗಳು ಕಷ್ಟದ ಮೇಲೆ ಕಷ್ಟ ಎದುರಿಸುವಂತೆ ಮಾಡಿದಾಗ, ಆರ್ಥಿಕ ಸಂಕಷ್ಟಗಳು ಪ್ರಾಣ ಹಿಂಡಿದಾಗ ಸಹಜವಾಗಿ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆ ಬರುತ್ತೆ. ಒಬ್ಬರೇ ಇರಬೇಕು ಅನ್ಸುತ್ತೆ. ಸಾಯಲು ನೂರು ಮಾರ್ಗಗಳು ಕಣ್ಣೆದುರು ಬರುತ್ತೆ. ನಾನು ಸತ್ತುಹೋದ್ರೇ ಈ ಕಷ್ಟಗಳಿಂದ ಮುಕ್ತಿ ಸಿಗುತ್ತೆ ಅನ್ಸುತ್ತೆ. ಆದ್ರೆ ಸತ್ತ ನಂತರ ನಿಮಗೆ ಸಿಗುವ ಮುಕ್ತಿ ನಿಮ್ಮನ್ನು ಪ್ರೀತಿಸಿದವರ, ಅವಲಂಭಿತರಾದವರ ಬದುಕು ಮುಳುಗಿಸುತ್ತೆ. ನೀವು ಸತ್ತು ಅವರನ್ನು ಸಾಯಿಸೋ ಹಕ್ಕು ನಿಮಗ್ಯಾರು ಕೊಟ್ಟಿದ್ದಾರೆ..?

 


ಸಾವೇ ಎಲ್ಲದಕ್ಕೂ ಪರಿಹಾರವಲ್ಲ. ಸಾವಿನಾಚೆಗೆ ಒಂದದ್ಭುತ ಬದುಕಿದೆ. ಇನ್ನು ಸಾಕು ಅಂತ ಯೋಚನೆ‌ ಮಾಡುವ ನಿಮ್ಮ ಮನಸ್ಸು, ‘ಇನ್ನೂ ಬೇಕು’ ಅನ್ನೋ ಹಾಗೆ ಬದಲಾಗಲಿ..! ಎಕ್ಸಾಮಲ್ಲಿ ಫೇಲ್ ಆದವನೆಲ್ಲಾ ಸಾಯೋ ಹಾಗಿದ್ರೆ ವಿಶ್ವದ ಅರ್ಧದಷ್ಟು ಅದ್ಭುತಗಳು, ಆವಿಷ್ಕಾರಗಳು ನಡೀತಾನೇ ಇರಲಿಲ್ಲ…! ಬದುಕು ಪುಸ್ತಕದ ಬದನೇಕಾಯಿಯಲ್ಲ, ವಾಸ್ತವದ ಸೇಬು ಹಣ್ಣು..! ಸಕಾರಾತ್ಮಕ ಆಲೋಚನೆಗಳು ಬದುಕನ್ನು ಸಿಹಿಯಾಗಿಸುತ್ತವೆ. ನಕಾರಾತ್ಮಕ ಆಲೋಚನೆಗಳು ಸಿಹಿಯಾದ ಹಣ್ಣಿನಂತಹ ಜೀವನಕ್ಕೆ ಹುಳ ಬೀಳುವ ಹಾಗೆ ಮಾಡುತ್ತವೆ. ಚಿಂತೆ ಬಿಟ್ರೆ ಮಾತ್ರ ಚಿತೆಯಿಂದ ದೂರವಿರಬಹುದು. ಚಿಂತೆ ಮತ್ತು ಚಿತೆಗಿರುವ ವ್ಯತ್ಯಾಸ ಒಂದು ‘0’ ಅಷ್ಟೆ..! ಆ ಚೆಂತೆಯಿಂದ ದೂರವಾಗಿ ‘ಚಿಂತನೆ’ ಕಡೆ ಗಮನಕೊಡಿ. ಒಳ್ಳೆಯ ಚಿಂತನೆ ಬದುಕು ರೂಪಿಸುತ್ತೆ. ಮೈಕೊಡವಿ ಎದ್ದರೆ ಯಾವ ಕಷ್ಟಗಳೂ ಹತ್ತಿರವೂ ಸುಳಿಯೋದಿಲ್ಲ..!

ಕಷ್ಟಗಳು ಫುಟ್ ಬಾಲ್ ಇದ್ದ ಹಾಗೆ. ಒದೆ ತಿಂತಾನೇ ಇರಬೇಕು. ಗೋಲ್ ಪೋಸ್ಟಿಗೆ ಹೋಗುವ ತನಕ..! ಆ ಗೋಲನ್ನು ಸಂಭ್ರಮಿಸುವ ದಿನಗಳಿಗೆ ಕಾಯಬೇಕು..! ಯಶಸ್ಸು ಕಷ್ಟಗಳನ್ನು ಮರೆಸುತ್ತೆ. ಎತ್ತರದಲ್ಲಿ ಮೆರೆಸುತ್ತೆ. ನೀವು ಫ್ಯಾನಿಗೆ ಕಟ್ಟೋ ನೇಣು ಕುಣಿಕೆ ನಿಮ್ಮ ಬದುಕು ಬದಲಿಸಲ್ಲ. ಬದುಕು ಮುಳುಗಿಸುತ್ತೆ. ನೀವು ಕುಡಿಯುವ ವಿಷ, ನಿಮ್ಮ ದೇಹಕ್ಕೆ ಮಾತ್ರ ಸೇರಲ್ಲ, ನಿಮ್ಮನ್ನು ನಂಬಿದವರನ್ನೂ ಸಾಯಿಸುತ್ತೆ. ಸತ್ತಾಗ ಬಿಟ್ಟು ಹೋದ ಹುಡುಗಿ ನಿಮ್ಮ ಹೆಣ ನೋಡೋಕೂ ಬರಲ್ಲ. ನಿಮ್ಮ ಫೇಲಾದ ರಿಸಲ್ಟ್ ಡಿಸ್ಟಿಂಕ್ಷನ್ ಆಗಿ ಬದಲಾಗಲ್ಲ. ಸಾಲ ಕೊಟ್ಟವನು, ಸತ್ತು ಹೋದ ಬಿಡು ಅಂತ ಸುಮ್ಮನಾಗಲ್ಲ..!


ಸಾಯ್ತೀನಿ ಅಂತ ನಿಮ್ಮ ಮನಸ್ಸು ಹೇಳಿದ್ರೆ ಅದಕ್ಕೆ ನಿಮ್ಮ ಮನಸಲ್ಲೇ ಚಪ್ಪಲೀಲಿ ಹೊಡೀರಿ. ಅದಕ್ಕೇ ಅವಮಾನವಾಗೋ ಹಾಗೆ ಬೆಳೀರಿ. ಅದನ್ನು ಪಾಸಿಟಿವ್ ಮನಸ್ಸಾಗಿ ಪರಿವರ್ತಿಸಿ… ಆತ್ಮಹತ್ಯೆ ಸಣ್ಣ ಯೋಚನೆ ಬಂದರೆ ‘ಗೆಳೆಯರ ಬಳಿ ಎಲ್ಲವನ್ನೂ ಹೇಳ್ಕೊಳಿ, ಕುಟುಂಬದವರ ಜೊತೆ ಒಳ್ಳೇ ಕ್ಷಣವನ್ನು ಅನುಭವಿಸಿ… ಆ ಕ್ಷಣ ಅದರಿಂದ ಹೊರಗೆ ಬನ್ನಿ… ‘ನನ್ನ ಸಾವಿಗೆ ನಾನೇ ಕಾರಣ’ ಅಂತ ಬರೆಯೋ ಪೆನ್ನಲ್ಲಿ ‘ ನನ್ನ ಯಶಸ್ಸಿಗೆ ನಾನೇ ಕಾರಣ’ ಅಂತ ಬರೆದಿಡಿ. ಗೆದ್ದ ದಿನ ಅದನ್ನು ಫ್ರೇಂ ಕಟ್ಟಿಸಿ ಮನೆಯಲ್ಲಿಡಿ… ಜಯ ನಿಮ್ಮದಾಗಲಿ…

Show More

Related Articles

Leave a Reply

Your email address will not be published. Required fields are marked *

Close