ಸಿನಿ ಸುದ್ದಿ

ಹೆಂಗೈತೆ ತಾರಕ್..? -Review

ದಸರಾ ಹಬ್ಬದಲ್ಲಿ ಕನ್ನಡ ಸಿನಿ ಪ್ರೇಕ್ಷಕನಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡೋಕೆ ಬಂದಿದೆ `ತಾರಕ್’ ರಿಲೀಸಿಗೆ ಮುಂಚೇನೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ತಾರಕ್ ಸಿನಿಮಾ ಮಂದಿರಗಳಲ್ಲಿ ಇವತ್ತು ಬೆಳಗ್ಗೆಯಿಂದಲೇ ಭರ್ಜರಿ ಪ್ರದರ್ಶನ ಕಾಣ್ತಿದೆ. ದರ್ಶನ್ ಅಭಿಮಾನಿಗಳಂತೂ ರಾತ್ರಿಯಿಂದಲೇ ಶೋ ಟಿಕೆಟ್ಟಿಗೋಸ್ಕರ ಕಾದು ನಿಂತಿದ್ರು. ಈಗಾಗಲೇ ಸಿನಿಮಾದ ಹೌಸ್ ಫುಲ್ ಪ್ರದರ್ಶನ ಸಿನಿಮಾ ಗಟ್ಟಿಯಾಗಿ ನಿಲ್ಲೋ ಭರವಸೆ ಮೂಡಿಸಿದೆ.ಹಾಗಾದ್ರೆ ಹೇಗಿದೆ `ತಾರಕ್’?
ಇದು ಎಂದಿನ ದರ್ಶನ್ ಸಿನಿಮಾ ಅಲ್ಲ ಅಂತ ಹೇಳಬಹುದು. ಕೇವಲ ಹೊಡಿಬಡಿಗೆ ಸೀಮಿತವಾಗದೇ ಒಂದದ್ಭುತ ಕೌಟುಂಬಿಕ ಸಿನಿಮಾ ಕೊಡುವ ಅದ್ಭುತ ಪ್ರಯತ್ನ ಮಾಡಿದ್ದಾರೆ `ಚಾಲೆಂಜಿಂಗ್ ಸ್ಟಾರ್’

ದರ್ಶನ್ ಅಭಿಮಾನಿಗಳಿಗೆ ಈ ಸಿನಿಮಾ ರಸದೌತಣ. ಸಿನಿಮಾ ಒಂದು ಫಾರ್ಮುಲಾ ಸಿನಿಮಾ ಅನ್ನಿಸದೇ ಇದ್ರೂ, ಒಂದು ಸಿನಿಮಾದಲ್ಲಿ ಏನಿರಬೇಕೋ ಅದನ್ನೆಲ್ಲಾ ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ ನಿರ್ದೇಶಕ ಪ್ರಕಾಶ್. ಪ್ರೇಮ ಮತ್ತು ಫ್ಯಾಮಿಲಿ ಇದೆರೆಡರ ಮಧ್ಯೆ ಸಿಕ್ಕಾಕಿಕೊಂಡ್ರೆ ಪರಿಸ್ಥಿತಿ ಹೇಗಿರುತ್ತೆ ಅನ್ನೋದನ್ನು ತುಂಬಾ ನೈಜವಾಗಿ ತೋರಿಸಿದ್ದಾರೆ. ಸಾಕಷ್ಟು ದೃಶ್ಯಗಳು `ನಂದೂ ಇದೇ ಕಥೆ ಗುರೂ’ ಅನಿಸೋ ಹಾಗೆ ಖಂಡಿತ ಮಾಡುತ್ತೆ.

ತಾರಕ್ ಅವರ ತಾತನ ಪಾತ್ರದಲ್ಲಿ ದೇವರಾಜ್ ಅವರು ತುಂಬಾ ಇಷ್ಟವಾಗ್ತಾರೆ. ಇಲ್ಲಿಯ ತನಕ ನೋಡಿದ್ದ ದೇವರಾಜ್ ಅವರಿಗೂ, ತಾರಕ್ ಚಿತ್ರದ ದೇವರಾಜ್ ಅವರಿಗೂ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ. ರಗ್ಬಿ ಆಟದ ದೃಶ್ಯಗಳು, ಕೆಲವು ಆಕ್ಷನ್ ಸೀಕ್ವೆನ್ಸ್, ವಿದೇಶದಲ್ಲಿ ಮಾಡಿರೋ ಕೆಲವು ಸೀನ್ ಕಣ್ಣಿಗೆ ಹಬ್ಬ. ಅಲ್ಲಲ್ಲಿ ಕೆಲವು ದೃಶ್ಯಗಳು ಸ್ವಲ್ಪ ಬೋರ್ ಹೊಡೆಸಿದ್ರೂ ನಂತರದ ದೃಶ್ಯಗಳು ಅದನ್ನು ಮರೆಸಿಬಿಡುತ್ತೆ.

ಇಬ್ಬರು ನಾಯಕಿಯರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಕಾಂಪಿಟೇಶನ್ನಿಗೆ ಬಿದ್ದ ಹಾಗೆ ಮುದ್ದಾಗಿ ಕಾಣ್ತಾರೆ. ಕುರಿ ಪ್ರತಾಪ್ ಸಿಕ್ಕ ಅವಕಾಶವನ್ನು ಸಖತ್ತಾಗಿ ಬಳಸಿಕೊಂಡಿದ್ದಾರೆ. ಇನ್ನುಳಿದಂತೆ ಅರ್ಜುನ್ ಜನ್ಯ ಅವರಿಂದ ಇನ್ನೂ ಜಾಸ್ತಿ ನಿರೀಕ್ಷೆ ಇತ್ತು. ಆದ್ರೂ ಎರಡು ಹಾಡುಗಳು ಮನಸಲ್ಲುಳಿಯುತ್ತೆ.


ಒಟ್ಟಾರೆ ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಸಿನಿಮಾ. ದರ್ಶನ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಎಲ್ಲರಿಗೂ ಇಷ್ಟವಾಗುವ ಸಿನಿಮಾ. ಭಾವನಾತ್ಮಕ ಎಳೆಗಳನ್ನು ಬಿಚ್ಚಿಡೋ ಅಪ್ಪಟ ಕನ್ನಡದ ಸಿನಿಮಾ… ಚಿತ್ರಮಂದಿರದಲ್ಲೇ ಕನ್ನಡ ಸಿನಿಮಾಗಳನ್ನು ನೋಡಿ,ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ.

Show More

Related Articles

Leave a Reply

Your email address will not be published. Required fields are marked *

Close