ಏನ್ ಸುದ್ದಿ?

ಟ್ರೋಲ್ ಮತ್ತು ಪೊಲೀಸ್ ಕಂಟ್ರೋಲ್…!

– ಕಿರಿಕ್ ಕೀರ್ತಿ
‘ಮಗಾ ಈ ಟ್ರೋಲ್ ನೊಡಿದ್ಯಾ? ಎಷ್ಟ್ ಸಖತ್ತಾಗಿದೆ… ಈ ನನ್ಮಕ್ಳಿಗೆ ಸಖತ್ ತಲೆ ಗುರು..!’ ಸೋಶಿಯಲ್ ನೆಟ್ವರ್ಕಲ್ಲಿ ಟ್ರೋಲ್ ಪೇಜುಗಳನ್ನು ಫಾಲೋ ಮಾಡೋರು ಒಮ್ಮೆಯಾದರೂ ಈ ಮಾತು ಹೇಳಿರ್ತಾರೆ. ಯಾಕಂದ್ರೆ ಈ ಟ್ರೋಲ್ ಪೇಜ್ ಅಡ್ಮಿನ್‌ಗಳ ಕ್ರಿಯೇಟಿವಿಟಿ ಅಂತದ್ದು. ಅದೆಷ್ಟೋ ಜನರ ಮುಖದಲ್ಲಿ ನಗು ತರಿಸೋದ್ರಲ್ಲಿ ಟ್ರೋಲ್ ಪೇಜುಗಳ ಪಾತ್ರ ದೊಡ್ಡದಿದೆ. ಆದ್ರೆ ಇಂತಹ ಟ್ರೋಲ್ ಪೇಜ್‌ಗಳು ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರೋದು ಯಾಕೆ…? ಉತ್ತರ ಇಲ್ಲಿದೆ.
ಇಡೀ ವಿಶ್ವದಲ್ಲಿ ಇಂದು ಟ್ರೋಲ್ ಪೇಜುಗಳ ಹವಾ ಇದೆ. ಅಮೆರಿಕದ ಅಧ್ಯಕ್ಷರಿಂದ ಹಿಡಿದು, ಒಂದು ತಾಲ್ಲೂಕಿನ‌ ಎಮ್ಮೆಲ್ಲೆ ತನಕ ಟ್ರೋಲ್ ಆಗ್ತಾ ಇರ್ತಾರೆ. ಆದ್ರೆ ಕರ್ನಾಟಕದ ಟ್ರೋಲಿಗರ ಮೇಲ್ಯಾಕೆ ಪೊಲೀಸರು ಕೆಂಗಣ್ಣು ಹಾಕಿದ್ದಾರೆ ಅಂದ್ರೆ, ಇದರಲ್ಲಿ ಕೆಲವು ಟ್ರೋಲ್ ಪೇಜುಗಳ ತಪ್ಪಿದೆ. ಕರ್ನಾಟಕದಲ್ಲಿ ನೂರಾರು ಟ್ರೋಲ್ ಪೇಜುಗಳಿವೆ, ಆದ್ರೆ ಅದರಲ್ಲಿ ಹತ್ತು-ಹನ್ನೆರೆಡು ಪೇಜುಗಳು ಹದ್ದು ಮೀರಿ ಹೋಗಿವೆ. ಆ ಹುಳಗಳಿಂದಾಗ ಸಭ್ಯ ಟ್ರೋಲಿಗರಿಗೂ ಸಮಸ್ಯೆಯಾಗಿದೆ. ಯಾರೋ ಒಬ್ಬ ಮಾಡುವ ಟ್ರೋಲ್ ನೋಡಿ, ಎಲ್ಲಾ ಟ್ರೋಲ್‌ಗಳೂ ಹಿಂಗೇ ಅಂತ ಪೊಲೀಸರು ಯೋಚಿಸೋದೂ ತಪ್ಪಾಗುತ್ತೆ.

ಆರೋಗ್ಯಕರವಾಗಿ ಟ್ರೋಲ್ ಮಾಡದೇ, ಅಸಭ್ಯ ಪದಬಳಕೆ ಮಾಡೋ ಟ್ರೋಲ್ ಪೇಜ್‌ಗಳನ್ನು ಹುಡುಕಿ ವಾರ್ನಿಂಗ್ ಕೊಡಬೇಕೇ ಹೊರತು, ಇರೋಬರೋ ಟ್ರೋಲಿಗರನ್ನೆಲ್ಲಾ ಟಾರ್ಗೆಟ್ ಮಾಡಿದರೆ ಹೇಗೆ..? ಎಲ್ಲಾ ಟ್ರೋಲ್ ಪೇಜುಗಳೂ ಒಂದೇ ಅಲ್ಲ. ಇಂದು ಸಮಾಜಮುಖಿಯಾಗಿ, ನಾಡು ನುಡಿಯನ್ನು ಮೇಲೆತ್ತುವ, ಪರಿಸರ ಉಳಿಸುತ್ತಿರೋ ಹತ್ತಾರು ಟ್ರೋಲ್ ಪೇಜುಗಳಿವೆ. ಅವುಗಳನ್ನೂ ಆ ಕಿತ್ತೋದ ಟ್ರೋಲ್ ಪೇಜುಗಳ ಸಾಲಿಗೆ ಸೇರಿಸೋದರಲ್ಲಿ ಅರ್ಥ ಇಲ್ಲ. ಸರ್ಕಾರ ಕೊಟ್ಟ ಸೈಕಲ್ ಓಡಿಸುವಾಗ ವಿದ್ಯಾರ್ಥಿಯೊಬ್ಬಳಿಗೆ ಅಪಘಾತ ಆಯ್ತು ಅಂತ ಸರ್ಕಾರ ಸೈಕಲ್ ಕೊಡೋದನ್ನೇ ನಿಲ್ಲಿಸಬೇಕು ಅಂದ್ರೆ ಹೇಗೆ…? ಮದುವೆಯಾದ ಸಾವಿರ ಜೋಡಿಗಳಲ್ಲಿ ಒಂದೆರೆಡು ಡೈವೋರ್ಸ್ ಆಗುತ್ತೆ ಅಂತ, ಮದುವೆ ಆಗೋದೇ ತಪ್ಪು ಅಂದ್ರೆ ಹೆಂಗೆ..? ಕೆಟ್ಟದಾಗಿ ಟ್ರೋಲ್ ಮಾಡೋರನ್ನ, ಸಮಾಜದ ಸ್ವಾಸ್ಥ್ಯ ಕೆಡಿಸೋರನ್ನ ಖಂಡಿತ ಬಿಡಬಾರದು. ಯಾರದಾದರೂ ಮಾನನಷ್ಟವಾಗುವಂತಹ ಟ್ರೋಲ್ ನೋವು ಕೊಡುತ್ತೆ ನಿಜ. ಅದನ್ನು ಪದೇ ಪದೇ ಮಾಡೋರಿಗೆ ಎಚ್ಚರಿಸಿ. ಅದನ್ನು ಬಿಟ್ಟು ಅವರನ್ನು ಕೊಲೆಗಾರರಂತೆ ನೋಡಿದ್ರೆ ಹೇಗೆ..?

ಲಕ್ಷ ಲಕ್ಷ ಹಿಂಬಾಲಕರು ಯಾಕಿರ್ತಾರೆ..?
ನಿಜಕ್ಕೂ ಎಲ್ಲಾ ಟ್ರೋಲ್‌ಗಳು ಅಷ್ಟು ಕೆಟ್ಟವು ಅಂತಾದ್ರೆ, ಆ ಪೇಜುಗಳಿಗೆ ಲಕ್ಷಲಕ್ಷ ಹಿಂಬಾಲಕರು ಇರೋಕೆ ಹೇಗೆ ಸಾಧ್ಯ? ಈ ಪ್ರಶ್ನೆಯೇ ಉತ್ತರ ನೀಡುತ್ತದೆ..! ಅಷ್ಟು ಲಕ್ಷ ಜನ, ಟ್ರೋಲಿಗರನ್ನು ಮೆಚ್ಚಿಕೊಂಡಿರೋದು ಅವರ ಕ್ರಿಯಾಶೀಲತೆಗೆ, ಅವರ ಹಾಸ್ಯ ಪ್ರಜ್ಞೆಗೆ, ಅವರು ಕೊಡುವ ಮಾಹಿತಿಗಳಿಗೆ, ಅವರುಗಳ ಸಮಾಜಮುಖಿ ಕೆಲಸಗಳಿಗೆ… ಅದೆಷ್ಟೋ ಟ್ರೋಲ್ ಪೇಜ್ ಅಡ್ಮಿನ್‌ಗಳು ಅನಾಥಾಶ್ರಮದ ಮಕ್ಕಳ ಹಸಿವು ನೀಗಿಸುತ್ತಾರೆ, ನೂರಾರು ಗಿಡ ನೆಟ್ಟಿದ್ದಾರೆ, ಕನ್ನಡ ಭಾಷೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕನ್ನಡದ ಸಿನಿಮಾಗಳನ್ನು ಜೀವಂತವಾಗಿಟ್ಟಿದ್ದಾರೆ. ಕಾನೂನಿನ ನಿಯಮಗಳನ್ನು ಪಾಲಿಸಿ ಅಂತ ಹೇಳೋ ನೂರಾರು ಮೀಮ್ಸ್, ವೀಡಿಯೊ ಮಾಡಿ ಜನರಿಗೆ ತಲುಪಿಸಿದ್ದಾರೆ… ಈ ಕಾರ್ಯಗಳ ಪ್ರತಿಫಲವೇ ಅವರ ಹಿಂದಿರೋ ಲಕ್ಷ ಲಕ್ಷ ಫಾಲೋಯರ್ಸ್…

ಎಲ್ಲರಿಗೂ ಬೇಕು ಈ ಟ್ರೋಲುಗಳು..!
ಹೌದು, ಫಾಲೋಯರ್ಸ್‌ಗಳು ಒಂದು ಕಾರಣಕ್ಕೆ ಟ್ರೋಲ್ ಪೇಜುಗಳನ್ನು ಹಿಂಬಾಲಿಸಿದ್ರೆ, ಸೆಲೆಬ್ರಿಟಿಗಳು ಮತ್ತೊಂದು ಕಾರಣಕ್ಕೆ ಅವರನ್ನು ಅವಲಂಭಿಸಿರ್ತಾರೆ. ಯಾರಾದರೂ ಎದೆ ಮುಟ್ಟಿಕೊಂಡು ಹೇಳಲಿ, ನಮಗೆ ಈ ಟ್ರೋಲ್‌ಗಳಿಂದ ಲಾಭವಾಗಿಲ್ಲ‌ ಅಂತ. ಯಾವುದೋ ಕೆಲವು ಟ್ರೋಲಿಗರು ಮಾಡಿದ ತಪ್ಪಿಗೆ ಎಲ್ಲರ ಮೇಲೂ ಪ್ರಹಾರ ಮಾಡೋದು ಸರಿಯಲ್ಲ. ಕನ್ನಡದ ಅದೆಷ್ಟು ಸಿನಿಮಾಗಳು ಈ ಟ್ರೋಲಿಗರಿಂದ ಉಸಿರಾಡಿಲ್ಲ.? ಪರಭಾಷಾ ಹಾವಳಿಯಿಂದ ‘ರಂಗಿತರಂಗ’ ಸಿನಿಮಾ ಮಾಯವಾಗೋ ಟೈಮಲ್ಲಿ ಅದರ ಪರವಾಗಿ‌ ನಿಂತು ಸಿನಿಮಾ ಸೂಪರ್ ಹಿಟ್ ಮಾಡಿಸಿದ್ದರಲ್ಲಿ ದೊಡ್ಡ ಪಾಲು ಟ್ರೋಲ್ ಪೇಜ್‌ಗಳದ್ದು..!

ಅದೆಷ್ಟು ಸ್ಟಾರ್‌ಗಳು ಇದೇ ಪೇಜ್‌ಗಳಿಂದ ಲೈವ್ ಬಂದಿಲ್ಲ. ಯಾಕೆ ಈ ಸಮಯದಲ್ಲಿ ಅವರುಗಳು ಟ್ರೋಲಿಗರ ಪರ ನಿಲ್ಲಬಾರದು? ಟ್ರೋಲ್ ಮಾಡೋರು ಲಕ್ಷಲಕ್ಷ ದುಡ್ಡು ಮಾಡ್ತಾರೆ ಅಂತ ಕೆಲವರು ನಂಬಿದ್ದರೆ ಅದು ಸುಳ್ಳು. ಟ್ರೋಲ್ ಪೇಜುಗಳ ಹೆಸರಲ್ಲಿ ಯಾರಾದ್ರೂ ಮಾಡಿರಬಹುದು, ಆದ್ರೆ ಟ್ರೋಲ್ ಪೇಜ್‌ಗಳಿಗೆ ಪ್ರಮೋಶನ್, ಅದು ಇದು ಅಂತ ಸಿಗೋದು ಪಾಕೆಟ್ ಮನಿ ಅಷ್ಟೆ. ಅದು ಲಕ್ಷಲಕ್ಷ ಜನರಿಗೆ ಪೋಸ್ಟ್ ತಲುಪಿಸೋಕೆ ಪಡೆಯೋ ಸಣ್ಣ ಸಂಭಾವನೆ. ಈ ವಿಷಯದಲ್ಲಿ ಯಾವ ಅನುಮಾನವೂ ಬೇಡ… ಎಲ್ಲರೂ ಕೆಟ್ಟವರಲ್ಲ, ಕೆಟ್ಟವರಿಗೂ ಏನೂ ಮಾಡಬೇಡಿ ಅಂತಲೂ ಹೇಳ್ತಿಲ್ಲ. ಕರೆದು ಬುದ್ದಿ ಹೇಳಿದೀರಿ, ಇದರಿಂದಾಗಿ ತಪ್ಪು ಮಾಡಿದವರೂ ಖಂಡಿತ ತಿದ್ದಿಕೊಳ್ತಾರೆ. ಅವಕಾಶ ಕೊಟ್ಟು ನೋಡಿ. ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆಯಿಂದ ಮಾಡಿದ ಅದೆಷ್ಟೋ ಮೀಮ್ಸ್ ನಾವು ನೀವೆಲ್ಲಾ ನೋಡಿದ್ದೇವೆ. ಈಗ ಯಾವುದೋ ಒಂದೆರೆಡು ಪೇಜುಗಳು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷಿಸೋದು ಯಾವ ನ್ಯಾಯ? ನಮ್ಮ ಪೊಲೀಸ್ ಇಲಾಖೆ, ನಮ್ಮ ನಟ ನಟಿಯರು ನಮ್ಮ ಹೆಮ್ಮೆ ಅನ್ನೋದನ್ನು ಸಭ್ಯ ಟ್ರೋಲಿಗರು ಯಾವತ್ತೂ ಮರೆತಿಲ್ಲ,ಮರೆಯಲ್ಲ… ಇದೊಂದು ಸಲ ಅವರಿಗೆಲ್ಲಾ ಅವಕಾಶ ಕೊಟ್ಟು ನೋಡಿ‌… ಪ್ಲೀಸ್…

Tags
Show More

Related Articles

Leave a Reply

Your email address will not be published. Required fields are marked *

Close