ಒಳ್ಳೆ ವಿಷ್ಯ

ಬೆಳಗ್ಗೆ ಎದ್ದೆದ್ದು ಯಾರ ಮುಖ ನೋಡಿದ್ರೆ ಒಳ್ಳೇದಾಗುತ್ತೆ..?

ದಿನದ ಆರಂಭ ಯಾವಾಗ್ಲೂ ಅದ್ಭುತವಾಗಿರ್ಬೇಕು. ಇಲ್ಲಾ ಅಂದ್ರೆ ಅವತ್ತಿನ ಇಡೀ ದಿನ ಹಾಳು..! ಅದೇನೋ ಸಮಾಧಾನಾನೇ ಇರಲ್ಲ. ಬೆಳಗ್ಗೆ ಎದ್ದಾಗ ಒಂದಷ್ಟು ಪಾಸಿಟಿವಿಟಿ ನಮ್ಮನ್ನು ಆವರಿಸಿದ್ರೆ ಅದು ರಾತ್ರಿ ಮಲಗೋ ತನಕ ಹಾಗೇ ಇರುತ್ತೆ..! ಹಾಗಾದ್ರೆ ದಿನಪೂರ್ತಿ ಚೆನ್ನಾಗಿರಬೇಕು ಅಂದ್ರೆ ಬೆಳಗ್ಗೆ ಎದ್ದು ಯಾರ ಮುಖ ನೋಡಬೇಕು..?

ಇದಕ್ಕೆ ರಕ್ಷಿತ್ ಶೆಟ್ಟಿ ಉತ್ತರ ಕೊಡ್ಬೇಕು. ‘ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ, ಅಂದಾನೋ ಅದೃಷ್ಟಾನೋ ಕಣ್ಣ ಮುಂದಿದೆ’ ಅಂದವರು ಅವರೇ ತಾನೇ.. ಹಹ್ಹಹ್ಹ… ವಿಷಯಕ್ಕೆ ಬರೋಣ, ನಮ್ಮಲ್ಲಿ ನಾನಾ ನಂಬಿಕೆಗಳಿವೆ. ಬೆಳಗ್ಗೆ ಎದ್ದು ದೇವರ ಫೋಟೋ ನೋಡೋದು, ಪ್ರೀತಿ ಪಾತ್ರರನ್ನ ನೋಡೋದು, ಎರಡೂ ಕೈ ಉಜ್ಜಿ ಮುಖಕ್ಕೆ ಸವರಿ ಹಸ್ತ ನೋಡಿಕೊಳ್ಳೋದು, ಹೀಗೆ ಹತ್ತಾರು ರೀತಿಯ ಜನ ಇರ್ತಾರೆ… ಆದ್ರೆ ನಿಜಕ್ಕೂ ಬೆಳಗ್ಗೆ ಎದ್ದು ಯಾರ ಮುಖ ನೋಡಬೇಕು.? ಏನ್ ನೋಡಿದ್ರೆ ಒಳ್ಳೇದು..? ಉತ್ತರ ನಮಗೂ ಗೊತ್ತಿಲ್ಲ…!

ಅಷ್ಟಕ್ಕೂ ಬೆಳಗ್ಗೆ ಎದ್ದು ದೇವರ ಫೋಟೋ ನೋಡೋಕೆ ಕಾರಣ ನಾವು ಆ ದೇವರ ಮೇಲಿಟ್ಟಿರುವ ನಂಬಿಕೆ. ದೇವರು ಅಂದ್ರೆ ಅದೊಂದು ಶಕ್ತಿ. ಆ ಶಕ್ತಿ ನಮ್ಮನ್ನು ಬೆಳಗೆದ್ದ ಕೂಡಲೇ ಆವರಿಸಿಕೊಂಡ್ರೆ ದಿನವಿಡೀ ಅದ್ಭುತವಾಗಿರುತ್ತೆ ಅನ್ನೋದು ನಂಬಿಕೆ. ಅದು ನಿಜವೂ ಇರಬಹುದು. ಹಾಗೇ ಪ್ರೀತಿ ಪಾತ್ರರು, ಅಂದ್ರೆ ಅಪ್ಪ, ಅಮ್ಮ, ಹೆಂಡತಿ, ಗಂಡ, ಮಕ್ಕಳು ಹೀಗೆ ಅವರಿಗೆ ಅದೃಷ್ಟ ಅನಿಸೋರ ಮುಖ ನೋಡಿದ್ರೆ ಅವತ್ತಿನ ದಿನ ಸೂಪರ್ ಅಂತ ನಂಬುವ ಸಾಕಷ್ಟು ಜನರಿದ್ದಾರೆ..! ಕಾರಣ ಈ ಹಿಂದೆ ಅವರಿಂದಾಗಿ ಯಾವುದೋ ಕೆಲಸದಲ್ಲಿ ಸಿಕ್ಕ ಯಶಸ್ಸು.. ಯಾವಾಗ ನಾವು ಒಬ್ಬರನ್ನ ಅದೃಷ್ಟ ಅಂತ ನಂಬ್ತೀವೋ, ಅದಾದ ನಂತರ ನಮ್ಮ ಮನಸೊಳಗೇ ನಾವು ಅವರ ಬಗೆಗೊಂದು ಪಾಸಿಟಿವಿಟಿ ತುಂಬಿಕೊಳ್ತೇವೆ. ಅಂಥವರ ಮುಖ ನೋಡಿ ಶುರು ಮಾಡಿದ ದಿನ ನಿಮಗೇ ಗೊತ್ತಿಲ್ಲದೇ ನೀವು ಉತ್ಸಾಹದಲ್ಲಿರ್ತೀರಿ… ಇವತ್ತು ಅವರ ಮುಖ ನೋಡಿದೀನಿ, ಒಳ್ಳೇದಾಗುತ್ತೆ ಅಂತ ನಿಮ್ಮ ಮನಸ್ಸು ಫಿಕ್ಸ್ ಆಗಿರುತ್ತೆ. ಅದಕ್ಕನುಸಾರವಾಗಿ ನಿಮ್ಮ ಶ್ರಮ ಸಾಥ್ ಕೊಡುತ್ತೆ… ಆ ಕಾರಣದಿಂದಾಗಿ ಇಡೀ ದಿನ ಖುಷಿಖುಷಿಯಾಗಿರುತ್ತೆ…

ಆ ಭಗವಂತನ ಸೃಷ್ಟಿಯಲ್ಲಿ ಕೆಟ್ಟದ್ದು ಅಂತ ಯಾವುದೂ ಇಲ್ಲ. ಜಗತ್ತಿನ ಕಾಲಿಟ್ಟ ಮೇಲೆ, ನಾವು ನೀವು ಕೆಟ್ಟವರಾಗ್ತೀವಿ ಅಷ್ಟೆ.. ಹಾಗೆಯೇ ಅದೃಷ್ಟಕ್ಕೆ ಒಂದು ಮುಖವಿಲ್ಲ. ನಿಮ್ಮ ಮನಸ್ಸೇ ನಿಮ್ಮ ಅದೃಷ್ಟ..! ಅದು ಅಚಲವಾಗಿದ್ರೆ, ಅದರಲ್ಲಿ ಉತ್ಸಾಹ ಇದ್ರೆ ಪ್ರತಿದಿನ, ಪ್ರತಿ ಕ್ಷಣ ನೀವು ಸಂತೋಷದಿಂದ ಇರ್ತೀರಿ… ಹಾಗೆಯೇ ಯಾರನ್ನೂ ಅನಿಷ್ಟ ಅಂತ ಭಾವಿಸಬೇಡಿ. ‘ ಬೆಳಗೆದ್ದು ನಿನ್ನ ಮುಖ ನೋಡಿದ್ರೆ ಇಡೀ ದಿನ ಹಾಳು’ ಅಂತ ಯಾರಿಗೂ ಹೇಳ್ಬೇಡಿ… ನಿಮ್ಮ ನಂಬಿಕೆ ನಿಮ್ಮ ಜೊತೆಗಿರಲಿ, ಆದ್ರೆ ಅದು ಮಿತಿಮೀರಿ ಇನ್ಯಾರನ್ನೋ ನೋಯಿಸದಿರಲಿ… ಶುಭದಿನ… ಖುಷಿಯಾಗಿರಿ…

ನಿಮ್ಮ ಕಿರಿಕ್ ಕೀರ್ತಿ…

Show More

Related Articles

Leave a Reply

Your email address will not be published. Required fields are marked *

Close